ಬೆಂಗಳೂರು | ನಗರ ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಕಳ್ಳತನ ಮಾಡುವುದರ ಮೂಲಕ ಜನರಲ್ಲಿ ಭಯ ಉಂಟು ಮಾಡಿದ್ದ ಚಡ್ಡಿ ಗ್ಯಾಂಗ್ (Chaddi Gang) ಈಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ (Hoskote) ನಗರಕ್ಕೂ ಕಾಲಿಟ್ಟಿದೆ.
ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಕುವೆಂಪು ನಗರದಲ್ಲಿ ನಿನ್ನೆ ರಾತ್ರಿ 2 ಗಂಟೆ ಸುಮಾರಿಗೆ ಚಡ್ಡಿ ಗ್ಯಾಂಗ್ ಕಳ್ಳರು ಬೀಗ ಹಾಕಿದ್ದ ಮನೆಯ ಬಾಗಿಲನ್ನು ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಉತ್ತರ ಭಾರತದ ನಾಲ್ಕೈದು ಜನ ಸಂಶಯಸ್ಪದವಾಗಿ ಚಡ್ಡಿ ಗ್ಯಾಂಗ್ ಎಂದು ಹೆಸರಾಗಿರುವ ವ್ಯಕ್ತಿಗಳು ಕಿಟಕಿಯಾ ಸರಳನಾ ಮುರಿದು ಮನೆ ಒಳಗಡೆ ಹೋಗುವ ನಟೋರಿಯಸ್ ಪ್ರವೃತ್ತಿಯನ್ನು ಹೊಂದಿದವರಾಗಿದ್ದಾರೆ. ಆದ್ದರಿಂದ ಸಾರ್ವಜನಿಕರು ಮನೆಯನ್ನು ಬೀಗ ಹಾಕಿಕೊಂಡು ಹೋಗುವಾಗ ಹಣ ಒಡವೆ ಹಾಗೂ ಯಾವುದೇ ರೀತಿಯ ಬೆಲೆಬಾಳುವ ವಸ್ತುಗಳು ಮನೆಯಲ್ಲಿ ಇಡದೆ ಸುರಕ್ಷಿತವಾಗಿ ನೋಡಿಕೊಳ್ಳತಕ್ಕದ್ದು.
ಅಲ್ಲದೆ ರಾತ್ರಿ ವೇಳೆಯಲ್ಲಿ ಯಾರೇ ಅಪರಿಚಿತರು ಬಾಗಿಲನ್ನು ತಟ್ಟಿದರೆ ಬಾಗಿಲನ್ನು ತೆಗೆಯಬಾರದು. ಮನೆಯಲ್ಲಿ ಸುರಕ್ಷಿತವಾಗಿ ಇರತಕ್ಕದ್ದು ಎಂದು ಹೊಸಕೋಟೆ ಪೊಲೀಸ್ ಠಾಣೆ ವತಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.
ಒಂದು ವೇಳೆ ಈ ರೀತಿಯ ಅನುಮಾನ ಆಸ್ಪದ ವ್ಯಕ್ತಿಗಳು ಕಂಡು ಬಂದರೆ ಹೊಸಕೋಟೆ ಪೊಲೀಸ್ ಠಾಣೆ ಅಥವಾ 112 ನಂಬರಿಗೆ ಕೂಡಲೇ ಕರೆ ಮಾಡುವಂತೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.