ಮನರಂಜನೆ | ಕನ್ನಡ ಚಿತ್ರರಂಗದ ಮೇರು ನಟ ಯಶ್ ಕೆಜಿಎಫ್ ಸಿನಿಮಾ ಮಾಡಿದ ಮೇಲೆ ಇಡೀ ಜಗತ್ತಿಗೆ ಕನ್ನಡ ಚಿತ್ರರಂಗವನ್ನು ಪರಿಚಯಿಸುವುದರ ಜೊತೆಗೆ ಇಡೀ ಜಗತ್ತಿಗೆ ಯಶ್ ಯಾರೆಂಬುದು ಗೊತ್ತಾಗಿದೆ. ಅವರು ಕೆಜಿಎಫ್ ಆದ ನಂತರ ಯಾವ ಸಿನಿಮಾ ಮಾಡುತ್ತಿದ್ದಾರೆ ಎನ್ನುವುದನ್ನು ಇದುವರೆಗೂ ಹೇಳಿಕೊಂಡಿರಲಿಲ್ಲ, ಇದೀಗ ಆ ಸಿನಿಮಾ ಬಗ್ಗೆ ಒಂದಿಷ್ಟು ಸುಳಿವು ನೀಡಿದ್ದಾರೆ.
ಹೌದು,, ತಮ್ಮ ಮನೆಯದೇವರು ನಂಜನಗೂಡು ನಂಜುಂಡೇಶ್ವರ ಸನ್ನಿಧಿಗೆ ಭೇಟಿ ನೀಡಿ ಪೂಜೆಗಳನ್ನು ನೆರವೇರಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರೇ ನಮ್ಮನ್ನು ಬೆಳೆಸಿದ್ದು ನಮ್ಮ ಮೇಲೆ ಬಹಳ ನಂಬಿಕೆ ಇಟ್ಟಿದ್ದಾರೆ. ಹಣ ಕೊಟ್ಟು ಸಿನಿಮಾ ನೋಡುತ್ತಾರೆ ಅವರಿಗೆ ಯಾವುದೇ ರೀತಿಯಿಂದಲೂ ನಾವು ಮೋಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ನಾನು ಒಂದು ಕ್ಷಣವನ್ನು ವ್ಯರ್ಥ ಮಾಡುತ್ತಿಲ್ಲ. ಎಲ್ಲಾ ಸಿನಿಮಾ ಕೆಲಸಗಳು ನಡೆಯುತ್ತಿವೆ. ಕೆಜಿಎಫ್ ಸಿನಿಮಾ ಬಂದ ಮೇಲೆ ನಮ್ಮ ಮೇಲೆ ಜವಾಬ್ದಾರಿ ಹೆಚ್ಚಿದೆ. ಫ್ರೀ ಆಗಿ ಸಿನಿಮಾ ತೋರಿಸುವುದಾಗಿದ್ದರೆ. ಹೇಗೆ ಬೇಕಾದರೂ ಮಾಡಬಹುದು ಆದರೆ ಅವರು ಹಣ ಕೊಟ್ಟು ಸಿನಿಮಾ ನೋಡುತ್ತಾರೆ. ಅದಕ್ಕೆ ಗೌರವ ಇರಬೇಕು ಮನರಂಜನೆ ಸಿಗಬೇಕು ಹೀಗಾಗಿ ಇಡೀ ವಿಶ್ವ ಇಡೀ ಭಾರತ ಇಡೀ ಕರ್ನಾಟಕದ ಜನ ನಮ್ಮ ಕಡೆ ನೋಡುತ್ತಿದ್ದಾರೆ ಅವರ ನಿರೀಕ್ಷೆ ನಾವು ಹುಸಿ ಮಾಡುತ್ತಿಲ್ಲ ಎಂದರು.
ಇನ್ನು ಯಶ್ ಬಾಲಿವುಡ್ ಗೆ ಹೋಗುತ್ತಾರೆ ಎಂದು ಹರಿದಾಡುತ್ತಿದ್ದ ಸುದ್ದಿಗೆ ಸ್ಪಷ್ಟನೆ ನೀಡಿದ ಅವರು, ನಾನು ಎಲ್ಲಿಗೂ ಹೋಗುವುದಿಲ್ಲ ನಾನಿರುವ ಕಡೆಗೆ ಅವರನ್ನು ಕರೆಸಿಕೊಳ್ಳುತ್ತಿದ್ದೇನೆ. ಅದರ ಬಗ್ಗೆ ಆಲೋಚನೆ ಬೇಡ ನಾನು ಹಿಂದೆಯೇ ಹೇಳಿದ್ದೇನೆ. ಕನ್ನಡ ಸಿನಿಮಾ ಮಾಡುವ ಮೂಲಕ ಇಡೀ ಜಗತ್ತಿಗೆ ಕನ್ನಡ ಸಿನಿಮಾಗಳ ಶಕ್ತಿ ಏನು ಅಂತ ಅರ್ಥ ಮಾಡಿಸುತ್ತೇನೆ ಎಂದು ಹೇಳಿದರು.