ತುಮಕೂರು | ಟೈಲ್ಸ್ ಅಂಗಡಿ ಮಾಲೀಕನನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ಹೊರಹೊಲಯದಲ್ಲಿರುವ ಯಲ್ಲಾಪುರದ ಟೈಲ್ಸ್ ಅಂಗಡಿಯಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಚಿಕ್ಕಮಗಳೂರು ಮೂಲದ ಜಾಕೀರ್ ಇಸ್ಮಾಯಿಲ್ (36) ಎಂದು ಗುರುತಿಸಲಾಗಿದೆ. ಜಾಕೀರ್ ಇಬ್ಬರು ಮಕ್ಕಳೊಂದಿಗೆ ಯಲ್ಲಾಪುರದ ಗಣೇಶ ದೇವಸ್ಥಾನದ ಬಳಿ ವಾಸವಿದ್ದರು. ನೂತನ ಟೈಲ್ಸ್ ಅಂಗಡಿಯನ್ನು 2 ತಿಂಗಳ ಹಿಂದೆ ಯಲ್ಲಾಪುರದಲ್ಲಿ ತೆರೆದಿದ್ದರು.
ಅಂಗಡಿಯಲ್ಲಿ ಕಾರ್ಯನಿರ್ವಹಿಸುವ ವೇಳೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದು, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ನೀಡಿ ಜಾಕೀರ್ ಸಹಾಯಕ ಖಾದರ್‌ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ರಾಹುಲ್ ಕುಮಾರ್ ಶಹಪುರವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇನ್ನೂ ಜಾಕೀರ್ ಶವ ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ತುಮಕೂರು ಜಿಲ್ಲಾಸ್ಪತ್ರೆಗೆ ಮೃತ ಜಾಕೀರ್‌ನ ಪತ್ನಿ ಹಾಗೂ ಸಂಬಂಧಿಕರು ಆಗಮಿಸಿದ್ದಾರೆ.