ಬೆಂಗಳೂರು | ಮಹಿಳೆಯರ (Woman) ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್ (Congress) ನಾಯಕರಾದ ರಂದೀಪ್ ಸುರ್ಜೇವಾಲ (Randeep Surjewala) ಸೇರಿದಂತೆ ಹಲವರ ವಿರುದ್ಧ ಅಖಿಲ ಭಾರತ ಕಾರ್ಮಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷೆ ಆರ್.ಗಿರಿಜಮ್ಮ ಹಾಗೂ ಇತರ ಮಹಿಳಾ ಮುಖಂಡರು ರಾಜ್ಯ ಮಹಿಳಾ ಆಯೋಗಕ್ಕೆ (Women’s Commission) ದೂರು ನೀಡಿದ್ದಾರೆ.
ಇತ್ತೀಚೆಗೆ ಬಾಲಿವುಡ್ ನಟಿ, ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದರಾದ ಹೇಮಾ ಮಾಲಿನಿ ಬಗ್ಗೆ ಮಾನಹಾನಿಕರ ಹೇಳಿಕೆ ನೀಡಿದ್ದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲ ಹಾಗೂ ಮಹಿಳೆಯರು ಅಡುಗೆ ಮಾಡುವುದಕ್ಕೆ ಲಾಯಕ್ಕು ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ವಿರುದ್ಧ ದೂರು ನೀಡಿದ್ದಾರೆ.
ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಅವರು ಮುನ್ನಡೆಸಿದ ಅಖಿಲ ಭಾರತೀಯ ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಸಮಾಜದಲ್ಲಿ ಅತ್ಯಂತ ಗೌರವ, ಸದ್ಬಾವನೆಯಿಂದ ಗೌರವಿಸಲ್ಪಡುವ ಮಹಿಳೆಯರ ಬಗ್ಗೆ ಅಪಮಾನ ಮಾಡಿರುತ್ತಾರೆ ಹಾಗೂ ಮಹಿಳೆಯರ ಗೌರವಕ್ಕೆ ಧಕ್ಕೆ ಉಂಟು ಮಾಡುವಂತಹ ಹೇಳಿಕೆಗಳನ್ನು ಕೊಟ್ಟಿದ್ದು, ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಮಹಿಳಾ ಆಯೋಗಕ್ಕೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.
ಸಂಸದರು, ಪ್ರಖ್ಯಾತ ನಟರೂ ಆಗಿರುವ ಹೇಮಾಮಾಲಿನಿ ಅವರ ಬಗ್ಗೆ ರಂದೀಪ್ ಸುರ್ಜೇವಾಲ ಅತ್ಯಂತ ಕೆಟ್ಟದ್ದಾಗಿ, ಅವರ ತೇಜೋವಧೆ ಮಾಡಿದ್ದು, ವೈಯಕ್ತಿಕ ಚಾರಿತ್ರ್ಯಹರಣ ಮಾಡುವ ರೀತಿಯಲ್ಲಿ ಹೇಳಿಕೆ ನೀಡಿರುತ್ತಾರೆ. “ನಾವೇಕೆ ಶಾಸಕ, ಸಂಸದರನ್ನು ಆಯ್ಕೆ ಮಾಡುತ್ತೇವೆ? ನಮ್ಮ ಪರ ದನಿ ಎತ್ತಲಿ ಅಂತ. ನಮ್ಮ ಪರವಾಗಿ ಕೆಲಸ ಮಾಡಲಿ ಅಂತ. ಆದರೆ, ಹೇಮಾಮಾಲಿನಿಯವರನ್ನು ನೆಕ್ಕಲು ಬಿಜೆಪಿಯವರು ಸಂಸದೆಯನ್ನಾಗಿ ಮಾಡುತ್ತಿದ್ದಾರೆಯೇ” ಎಂದು ರಂದೀಪ್ ಸುರ್ಜೆವಾಲ ಹೇಳಿಕೆ ನೀಡಿದ್ದರು.
ಸುರ್ಜೇವಾಲ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಆಗಿರುವ ಕಾರಣದಿಂದ ಅವರ ಹೇಳಿಕೆ ರಾಜ್ಯದ ಮಹಿಳೆಯರ ಬಗ್ಗೆ ಅಪಮಾನ ಮಾಡಿದಂತೆ ಆಗಿರುತ್ತದೆ. ಇಂಥ ಚಾರಿತ್ರ್ಯಹೀನ ಹೇಳಿಕೆ ನೀಡಿರುವ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡುತ್ತೇವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸ್ತ್ರೀಯರು ಅಡುಗೆ ಮಾಡುವುದಕ್ಕೆ ಲಾಯಕ್ಕು ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ಪಕ್ಷದ ನಾಯಕರ ಸ್ತ್ರೀದ್ವೇಷಿ ಮನೋಭಾವವನ್ನು ತೋರಿಸುತ್ತದೆ. ಆಕೆಗೆ ಮಾತನಾಡಲು ಬರುವುದಿಲ್ಲ. ಆಕೆ ಮನೆಯಲ್ಲಿ ಇರಲು ಲಾಯಕ್ಕು ಎಂದು ಶಾಮನೂರು ಶಿವಶಂಕರಪ್ಪ ಅವರು ದಾವಣಗೆರೆಯ ಬಿಜೆಪಿ ಅಭ್ಯರ್ಥಿಯನ್ನು ಗುರಿಯಾಗಿಸಿ ಹೇಳಿರುವುದು ಅಕ್ಷಮ್ಯ ಹಾಗೂ ಸಂವಿಧಾನಕ್ಕೆ ಎಸಗಿದ ಅಪಚಾರ. ಹೀಗಾಗಿ ಇವರ ವಿರುದ್ಧವೂ ಕಠಿಣ ಕೈಗೊಳ್ಳಬೇಕು ಎಂದು ಒತ್ತಾಯ ಮಾಡುತ್ತೇವೆ ಎಂದು ಗಿರಿಜಮ್ಮ ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.