ತುಮಕೂರು | 2024ನೇ ಲೋಕಸಭೆ ಚುನಾವಣೆಯ (Lok Sabha Elections) ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ (BJP and JDS alliance) ಅಭ್ಯರ್ಥಿ ವಿ. ಸೋಮಣ್ಣ (V. Somanna) ಅವರು ಸಾವಿರಾರು ತಮ್ಮ ಬೆಂಬಲಿಗರೊಡನೆ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ತುಮಕೂರು ನಗರದ ವಿನೋಬನಗರ ಬಳಿ ಇರುವ ಗಣಪತಿ ಮತ್ತು ಅರ್ಧನಾರೀಶ್ವರ ದೇಗಲುದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸೋಮಣ್ಣನವರು, ರೋಡ್ ಶೋ ನಡೆಸುವ ಮೂಲಕ ಟೌನ್ ಹಾಲ್, ಎಂಜಿ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಆಗಮಿಸಿದರು.
ಈ ವೇಳೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಎಚ್ ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್ ಅಶೋಕ್, ಸಂಸದ ಜಿ ಎಸ್ ಬಸವರಾಜು, ಮಾಜಿ ಸಚಿವ ಬಿ ಸಿ ನಾಗೇಶ್, ಜನಾರ್ದನ ರೆಡ್ಡಿ, ವೈ ಎ ನಾರಾಯಣಸ್ವಾಮಿ, ಶಾಸಕರಾದ ಸುರೇಶ್ ಗೌಡ, ಜ್ಯೋತಿ ಗಣೇಶ್, ಜೆಡಿಎಸ್ ಶಾಸಕ ಸುರೇಶ್ ಬಾಬು, ಮಾಜಿ ಶಾಸಕ ಸುಧಾಕರ್ ಲಾಲ್ ಸೇರಿದಂತೆ ಮತ್ತಿತರ ನಾಯಕರು ಸಾಥ್ ನೀಡಿದ್ದರು.
ಇದೇ ವೇಳೆಯಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಸೋಮಣ್ಣ ಅವರು, ಈ ಕ್ಷೇತ್ರದ ಮತದಾರರು ನೀಡಿರುವ ಬೆಂಬಲವನ್ನು ನೋಡಿದರೆ 23 ದಿನಗಳ ಕಾಲ 8 ವಿಧಾನಸಭಾ ಕ್ಷೇತ್ರಗಳನ್ನು ಸುತ್ತಾಡಿ ಬಂದಿದ್ದೇನೆ. ಇಂದು ಬಂದಂತಹ ಜನಸ್ತೋಮ ಭಗವಂತನ ದಯೆ, ಯಾವುದೋ ಜನ್ಮದಲ್ಲಿ ಮಾಡಿದ ಪುಣ್ಯ, ನನ್ನ ತಂದೆ ತಾಯಿಗಳ ಆಶೀರ್ವಾದ ಪರಮಪೂಜ್ಯ ನಡೆದಾಡುವ ದೇವರು ಡಾ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಜಿಗಳು, ಡಾ ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳ ದಿವ್ಯ ಸಂದೇಶ ಇದಾಗಿದೆ ಎಂದರು.
ನಮ್ಮ ನಾಯಕರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ ಇಂದು ಮೂರನೇ ತಾರೀಕು ಈ ಕ್ಷೇತ್ರದ ಜನ 100 ಪಟ್ಟು ಜವಾಬ್ದಾರಿಯನ್ನು ವಹಿಸಿದ್ದಾರೆ. ಇದೊಂದು ಮುಳ್ಳಿನ ಹಾಸಿಗೆಯನ್ನು ಈ ಭಾಗದ ಜನ ನನಗೆ ಸೃಷ್ಟಿ ಮಾಡಿಕೊಟ್ಟಿದ್ದಾರೆ. ಭಗವಂತನ ದಯೆ ಏನಿದೆಯೋ ಗೊತ್ತಿಲ್ಲ ಎಂದ ಅವರು ಎರಡು ಪಕ್ಷದ ನಾಯಕರು ಬೆಂಬಲ ಸೂಚಿಸಿದ್ದಕ್ಕೆ ಧನ್ಯವಾದ ಎಂದರು.