Thursday, December 12, 2024
Homeಜಿಲ್ಲೆತುಮಕೂರುV. Somanna | ತುಮಕೂರು ಲೋಕಸಭೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ. ಸೋಮಣ್ಣನವರಿಗೆ ಕನ್ನಡಪರ ಸಂಘಟನೆಗಳ...

V. Somanna | ತುಮಕೂರು ಲೋಕಸಭೆ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ. ಸೋಮಣ್ಣನವರಿಗೆ ಕನ್ನಡಪರ ಸಂಘಟನೆಗಳ ಸಾಥ್..!

ತುಮಕೂರು | ದೇಶದ ಭದ್ರತೆ, ದೇಶವನ್ನು ಸಮರ್ಥವಾಗಿ ಮುನ್ನಡೆಸುವ ಸಾಮರ್ಥ್ಯವಿರುವ ನರೇಂದ್ರ ಮೋದಿಯವರು (Narendra Modi) ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Elections) ತುಮಕೂರು (Tumkur) ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ವಿ. ಸೋಮಣ್ಣ (V. Somanna) ಅವರನ್ನು ಬೆಂಬಲಿಸಲು ನಗರದ ಕನ್ನಡ ಪರ ಸಂಘಟನೆಗಳ (A pro-Kannada organization) ಪ್ರಮುಖರ ಸಭೆ ಒಕ್ಕೊರಲ ತೀರ್ಮಾನ ತೆಗೆದುಕೊಂಡಿತು.

ನಗರದಲ್ಲಿ ನಡೆದ ವಿವಿಧ ಕನ್ನಡ ಪರ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಮಾತನಾಡಿದ ಕರುನಾಡ ವಿಜಯ ಸೇನೆ ರಾಜ್ಯಾಧ್ಯಕ್ಷ ಹೆಚ್.ಎನ್.ದೀಪಕ್, ಕನ್ನಡಪರ ಸಂಘಟನೆಗಳಿಗೆ ನಾಡು ಹಾಗೂ ದೇಶದ ರಕ್ಷಣೆ ಮುಖ್ಯ. ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿ, ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದು, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಸಾರಿದ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎನ್ನುವ ಕಾರಣಕ್ಕೆ ಬಿಜೆಪಿ, ಜೆಡಿಎಸ್ ಮೈತ್ರಿಯ ಎನ್.ಡಿ.ಎ ಅಭ್ಯರ್ಥಿ ವಿ. ಸೋಮಣ್ಣ ಅವರನ್ನು ಈ ಚುನಾವಣೆಯಲ್ಲಿ ಬೆಂಬಲಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ವಿ.ಸೋಮಣ್ಣಅವರನ್ನು ಬೆಂಬಲಿಸುವಂತೆ ಕನ್ನಡ ಪರ ಸಂಘಟನೆಗಳಿಗೆ ಮನವಿ ಮಾಡಿದ್ದರು. ಶಾಸಕರ ಮನವಿ ಕುರಿತು ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಚರ್ಚೆ ಮಾಡಿದಾಗ, ಸೋಮಣ್ಣಅವರಿಗೆ ಬೆಂಬಲ ನೀಡಲು ಸರ್ವಾನು ಮತದಿಂದ ತೀರ್ಮಾನ ಮಾಡಲಾಯಿತು ಎಂದು ಹೆಚ್.ಎನ್.ದೀಪಕ್ ಹೇಳಿದ್ದಾರೆ.

ಸಭೆಯಲ್ಲಿ ಹಾಜರಿದ್ದ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಶಂಕರ್ ಮಾತನಾಡಿ, ಮೋದಿ ಸರ್ಕಾರ ತುಮಕೂರು ನಗರಕ್ಕೆ ಸ್ಮಾರ್ಟ್ ಸಿಟಿ ಯೋಜನೆ ನೀಡಿ ನಗರದ ಅಭಿವೃದ್ಧಿಗೆ ಕೊಡುಗೆ ನೀಡಿದೆ. ನಗರದ ನಾವು ಎನ್.ಡಿ.ಎ ಅಭ್ಯರ್ಥಿ ವಿ. ಸೋಮಣ್ಣ ಅವರನ್ನು ಬೆಂಬಲಿಸಿ ಮೋದಿಯವರಿಗೆ ಗೆಲುವಿನ ಕೊಡುಗೆ ನೀಡಬೇಕು ಎಂದರು.

ಕೇಂದ್ರ ಸರ್ಕಾರ ಕೊಬ್ಬರಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗಧಿ ಮಾಡಿ ಖರೀದಿ ಮಾಡುವ ಮೂಲಕ ತೆಂಗು ಬೆಳೆಗಾರರ ಹಿತಕಾಪಾಡಬೇಕು, ಸೋಮಣ್ಣಅವರು ಸಂಸದರಾಗಿ ಆಯ್ಕೆಯಾದ ನಂತರ ಕೊಬ್ಬರಿ ಬೆಳೆಗಾರರ ಪರವಾಗಿ ಕೇಂದ್ರ ಸರ್ಕಾರದಲ್ಲಿ ಧ್ವನಿ ಮಾಡಬೇಕು ಎಂದು ಶಂಕರ್ ಮನವಿ ಮಾಡಿದರು.

ಕರುನಾಡ ವಿಜಯ ಸೇನೆ ರಾಜ್ಯಉಪಾಧ್ಯಕ್ಷ ಸೋಮಶೇಖರ್ ಮಾತನಾಡಿ, ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ನಾಡು, ನುಡಿ, ಗಡಿ ವಿಚಾರದಲ್ಲಿ ಹೋರಾಟ ನಡೆಸುವ ಕನ್ನಡ ಪರ ಸಂಘಟನೆಗಳ ಪರವಾಗಿ ನಿಲ್ಲಬೇಕು ಎಂದು ಒತ್ತಾಯಿಸಿದರು.

ಆರ್. ತನುಜ್ ಕುಮಾರ್ ಮಾತನಾಡಿ, ರಾಜಕೀಯ ಪಕ್ಷಗಳು ಕನ್ನಡಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರನ್ನು ರಾಜಕೀಯವಾಗಿ ಬಳಸಿಕೊಂಡು, ಗೆದ್ದ ನಂತರ ಕಡೆಗಣಿಸುವುದು ಕಂಡುಬಂದಿದೆ. ಇದಕ್ಕೆ ಅವಕಾಶವಾಗದಂತೆ, ನಾಡು, ನುಡಿಯ ರಕ್ಷಣೆ, ಸಮಸ್ಯೆ ನಿವಾರಣೆಗೆ ಹೋರಾಟ ರೂಪಿಸುವ ಸಂಘಟನೆಗಳಿಗೆ ರಾಜಕೀಯ ಪಕ್ಷಗಳು ಬೆಂಬಲ ನೀಡಬೇಕು, ಹೋರಾಟಗಾರರ ವಿರುದ್ಧ ದಾಖಲಾಗಿರುವ ಮೊಕದ್ದಮೆಗಳನ್ನು ದಾಖಲಿಸಿ ಹೋರಾಟ ಹತ್ತಿಕ್ಕುವ ಕಾರ್ಯಗಳು ನಿಲ್ಲಬೇಕು ಎಂದು ಒತ್ತಾಯಿಸಿದರು.

ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ರಂಗಸ್ವಾಮಿ ಮಾತನಾಡಿ, ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕೆಂಬ ಆಶಯದಿಂದ ಮಾಜಿ ಪ್ರಧಾನಿ ದೇವೇಗೌಡರು ಬೆಂಬಲ ಸೂಚಿಸಿ, ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದನ್ನು ಸ್ವಾಗತಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments