ತುಮಕೂರು | ಸರ್ಕಾರಿ ಅಧಿಕಾರಿಗಳು ಅಂದ್ರೆ ಸಾಕು ಅಷ್ಟಕ್ಕಷ್ಟೆ ಎಂಬ ಮನಸ್ಥಿತಿ ಕೆಲವರಲ್ಲಿದೆ ಆದರೆ ಇಂದು ಆ ಸರ್ಕಾರಿ ಅಧಿಕಾರಿ ಮಾಡಿದ ಕೆಲಸ ನಿಜಕ್ಕೂ ಕೂಡ ಎಲ್ಲರು ಮೆಚ್ಚುವಂತಹದ್ದಾಗಿದೆ. ಹೌದು… ಕಳೆದು ಹೋಗಿದ್ದ ಮಹಿಳೆಯೊಬ್ಬರ ಬ್ಯಾಗ್ ನ್ನು ಹಿಂದಿರುಗಿಸುವ ಮೂಲಕ ತುಮಕೂರು ಆರ್ ಟಿ ಒ (Tumkur RTO) ಇನ್ಸ್ಪೆಕ್ಟರ್ ಸದ್ರುಲ್ಲಾ ಷರೀಫ್ ಮಾನವೀಯತೆ ಮೆರದಿದ್ದಾರೆ.
ತುಮಮಕೂರು ನಗರದಲ್ಲಿರುವ ಮಡಿಲು ಆಸ್ಪತ್ರೆಯ ಮೆಟ್ಟಿಲುಗಳ ಮೇಲೆ ಬ್ಯಾಗ್ ಬಿದ್ದಿರುವುದನ್ನು ಕಂಡ ಆರ್‌ಟಿಓ ಇನ್ಸ್ಪೆಕ್ಟರ್ ಸದ್ರುಲ್ಲಾ ಷರೀಫ್ ಅವರು ಆ ಬ್ಯಾಗ್‌ನ್ನು ಎತ್ತಿಕೊಂಡು ಅಕ್ಕಪಕ್ಕ ಬ್ಯಾಗ್‌ನ ಮಾಲೀಕರಿಗಾಗಿ ಹುಡುಕಾಡಿದ್ದಾರೆ. ಆದರೆ ಆ ಬ್ಯಾಗ್ ವಾರಸುದಾರರು ಯಾರೂ ಪತ್ತೆಯಾಗದ ಕಾರಣ ತಕ್ಷಣ ಸಮೀಪದಲ್ಲೇ ಇದ್ದ ಹೊಸ ಬಡಾವಣೆ ಪೊಲೀಸ್ ಠಾಣೆಗೆ ತೆರಳಿ ತಮಗೆ ಸಿಕ್ಕ ಬ್ಯಾಗ್‌ನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.
ನಂತರ ಹೊಸಬಡಾವಣೆ ಠಾಣೆ ಪೊಲೀಸರು ಬ್ಯಾಗ್‌ನಲ್ಲಿದ್ದ ಕೆಲ ಚೀಟಿಯ ಮಾಹಿತಿ ಗಮನಿಸಿ ಮಡಿಲು ಆಸ್ಪತ್ರೆ, ಸ್ಕ್ಯಾನಿಂಗ್ ಸೆಂಟರ್‌ಗೆ ತೆರಳಿ ವಾರಸುದಾರರ ಪತ್ತೆಗಾಗಿ ಹುಡುಕಾಡಿದ್ದಾರೆ. ನಂತರ ಆಸ್ಪತ್ರೆ ಸಿಬ್ಬಂದಿ ಮೂಲಕ ವಾರಸುದಾರರ ಮೊಬೈಲ್ ನಂಬರ್ ಪಡೆದು ಸಂಪರ್ಕಿಸಿ ಅವರನ್ನು ಪೊಲೀಸ್ ಠಾಣೆಗೆ ಕರೆ ಬ್ಯಾಗ್ ಮರಳಿ ನೀಡಿದ್ದಾರೆ.
ಸಿಕ್ಕ ಬ್ಯಾಕ್ ನಲ್ಲಿ ಏನೆಲ್ಲಾ ಇತ್ತು..?
ಬ್ಯಾಗ್ ಕಳೆದುಕೊಂಡಿದ್ದವರು ತುಮಕೂರು ನಗರದ ಉಪ್ಪಾರಹಳ್ಳಿಯ ನೇತ್ರಾವತಿ ಎಂಬುವವರು. ತಮ್ಮ ಬ್ಯಾಗ್ ಹಿಂತಿರುಗಿಸಿದ ಆರ್‌ಟಿಓ ಇನ್ಸ್ಪೆಕ್ಟರ್ ಸದ್ರುಲ್ಲಾ ಷರೀಪ್ ಹಾಗೂ ಹೊಸ ಬಡಾವಣೆ ಠಾಣೆ ಪೊಲೀಸರಿಗೆ ನೇತ್ರಾವತಿಯವರು ಧನ್ಯವಾದ ಹೇಳಿದ್ದಾರೆ. ಇನ್ನೂ ಈ ಬ್ಯಾಗ್‌ನಲ್ಲಿ 8 ಸಾವಿರ ರೂ. ನಗದು, ಒಂದು ಮೊಬೈಲ್, ಮನೆಯ ಲಾಕರ್ ಕೀ, ಬೀರುವಿನ ಕೀ ಸೇರಿದಂತೆ ಇತರೆ ವಸ್ತುಗಳು ಇದ್ದವು.