ತುಮಕೂರು | ಸ್ಪೋಟಕ ವಸ್ತುಗಳನ್ನು ಬಳಸಿ ವಿಡಿಯೋ ಮಾಡಿ ಅದನ್ನು ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ರವರ ನಡೆಗೆ ಸಾರ್ವಜನಿಕರಿಂದ ಆಕ್ರೋಶ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇದೀಗ ತುಮಕೂರು ಜಿಲ್ಲೆಯ ಪೊಲೀಸರು (Tumkur Police) ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ತುಮಕೂರು ಜಿಲ್ಲಾ ಪೊಲೀಸ್ ಅಧಿಕರಾದ ಅಶೋಕ್ ಕೆ ವಿ ಅವರು, ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಐಡಿ ಹಳ್ಳಿ ಹೋಬಳಿಯ ಜನಕಲೋಟಿ ಬಳಿ ಇರುವ ಶ್ರೀ ರಾಯರ ಬೃಂದಾವನ ಫಾರ್ಮ್ ನ ಕೃಷಿ ಹೊಂಡದಲ್ಲಿ ಸ್ಪೋಟಕ ವಸ್ತುಗಳನ್ನು ಡ್ರೋನ್ ಪ್ರತಾಪ್ ಸಿಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮಾತ್ರವಲ್ಲದೆ ಇದರ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಲಾಗಿದೆ. ಕೃಷಿ ಹೊಂಡದಲ್ಲಿ ಯಾವುದೇ ಒಂದು ಸ್ಫೋಟಕ ವಸ್ತುವನ್ನು ಎಸೆದು ಪ್ರಯೋಗ ಮಾಡಲಾಗಿದ್ದು, ಇದರಿಂದ ಭಯ ಬೀಳುವಂತಹ ಭಾರಿ ಶಬ್ದ ಕೇಳಿಬಂದಿದೆ ಮತ್ತು ನೀರು ರಭಸವಾಗಿ ಚಿಮ್ಮಿರುವುದು ಗಮನಕ್ಕೆ ಬಂದಿದೆ.
ಇದೀಗ ಮಧುಗಿರಿ ವೃತ್ತ ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯ ಜನಕಲೂಟಿ ಗ್ರಾಮದ ಶ್ರೀ ರಾಯರ ಬೃಂದಾವನ ಫಾರ್ಮನ್ ನ ಕೃಷಿ ಹೊಂಡದಲ್ಲಿ ಸ್ಪೋಟಕ ವಸ್ತುವನ್ನು ಸಿಡಿಸಿದ ಆರೋಪಿ ಪ್ರತಾಪ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ
ಇನ್ನೂ ಮಧುಗಿರಿ ವೃತ್ತದ ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷಿ ಹೊಂಡದಲ್ಲಿ ಸ್ಪೋಟಕ ವಸ್ತುವನ್ನು ಸಿಡಿಸಿದ ಸ್ಥಳಕ್ಕೆ ಸ್ಥಳೀಯ ಅಧಿಕಾರಿಗಳೊಡನೆ ಎಸ್ ಪಿ ಅಶೋಕ್ ಅವರು ಭೇಟಿ ನೀಡಿ ಪರಿಶೀಲನೆ ಕೂಡ ನಡೆಸಿದ್ದಾರೆ.