ತುಮಕೂರು | ಕಾಂಗ್ರೆಸ್ ಅಭ್ಯರ್ಥಿಯ (Congress candidate) ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ಕಾರ್ಯಕರ್ತನಾಗಿ ಭಾಗವಹಿಸಿದ್ದಕ್ಕೆ ಬಿಜೆಪಿ (BJP) ಪಕ್ಷದ ಕಾರ್ಯಕರ್ತರು ಆಕ್ರೋಶಗೊಂಡು ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ (attack) ಮಾಡಿರುವಂತಹ ಘಟನೆ ತುಮಕೂರು (Tumkur) ಜಿಲ್ಲೆಯ ಕುಣಿಗಲ್ (Kunigal) ತಾಲೂಕಿನ ವ್ಯಾಪ್ತಿಯಲ್ಲಿ ನಡೆದಿದೆ.
ಈಗಾಗಲೇ ಲೋಕಸಭೆ ಚುನಾವಣೆಯ ಕಾವು ಜೋರಾಗಿದೆ. ಅಭ್ಯರ್ಥಿಗಳು ಮತಪ್ರಚಾರವನ್ನು ಮಾಡುತ್ತಿದ್ದಾರೆ. ಅಭ್ಯರ್ಥಿಗಳಿಗೆ ಸಾಥ್ ನೀಡುವಂತೆ ಕಾರ್ಯಕರ್ತರು ಕೂಡ ಅದರಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಇದು ಇಷ್ಟಕ್ಕೆ ಮಾತ್ರ ಸುಮ್ಮನಾಗದೆ ಮಾರಣಾಂತಿಕವಾಗಿ ಹಲ್ಲೆ ಮಾಡುವಂತಹ ಹಂತಕ್ಕೆ ಹೋಗಿರುವುದು ನಿಜಕ್ಕೂ ಕೂಡ ಆತಂಕ ಮೂಡಿಸದೆ.
ಘಟನೆಯ ವಿವರ
ಕುಣಿಗಲ್ ತಾಲೂಕಿನ ವೆಂಕಟಗೌಡನ ಪಾಳ್ಯದ ನಿವಾಸಿ ಕೀರ್ತಿ ಎಂಬುವರು ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದು ಇತ್ತೀಚಿಗಷ್ಟೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್ ನಾಮಪತ್ರ ಸಲ್ಲಿಕೆ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದರಿಂದ ಕುಪಿತಗೊಂಡ ಬಿಜೆಪಿ ಕಾರ್ಯಕರ್ತರು ಕುಣಿಗಲ್ ತಾಲೂಕಿನ ನಡೆ ಮಾವಿನಪುರ ಗ್ರಾಮದಲ್ಲಿ ಚಾಕು ಮತ್ತು ದೊಣ್ಣೆಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಸದ್ಯಕ್ಕೆ ಹಲ್ಲೆಗೊಳಗಾದ ಕೀರ್ತಿ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರಾದ ಚಂದ್ರ, ಜಗದೀಶ್, ಸುನಿಲ್ ಎಂಬುವರ ಮೇಲೆ ಕುಣಿಗಲ್ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.