ತುಮಕೂರು | 19-ತುಮಕೂರು ಲೋಕಸಭಾ ಕ್ಷೇತ್ರದ (Tumkur Lok Sabha Constituency) 1846 ಮತಗಟ್ಟೆಗಳು ಹಾಗೂ ಶಿರಾ, ಪಾವಗಡ, ಕುಣಿಗಲ್ ಕ್ಷೇತ್ರಗಳ ಮತಗಟ್ಟೆಗಳು ಒಳಗೊಂಡಂತೆ ಜಿಲ್ಲೆಯಲ್ಲಿ ಒಟ್ಟು 2618 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು (2618 Establishment of polling station), ಈ ಪೈಕಿ 546 ಮತಗಟ್ಟೆಗಳನ್ನು ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶುಭ ಕಲ್ಯಾಣ್ (DC Shub Kalyan) ಅವರು ತಿಳಿಸಿದರು.
ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಸಂಬಂಧ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, 19-ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 20932 ವಿಕಲಚೇತನ ಮತದಾರರು, 85 ವರ್ಷ ಮೇಲ್ಪಟ್ಟ 21,856 ಸೇರಿದಂತೆ ಒಟ್ಟು 42,788 ಮತದಾರರಿದ್ದು, ಜಿಲ್ಲೆಯಲ್ಲಿ ಒಟ್ಟು 60,435 ಮತದಾರರಿಗೆ ಅಂಚೆ ಮತಪತ್ರಗಳ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದರು. ಉಪಸ್ಥಿತರಿದ್ದ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ಮತಗಟ್ಟೆಗಳ ಪಟ್ಟಿಗಳನ್ನು ನೀಡಲಾಯಿತು.
ನಾಮಪತ್ರ ಸಲ್ಲಿಕೆ
ಅಭ್ಯರ್ಥಿಗಳಿಂದ ನಾಮಪತ್ರಗಳನ್ನು ಅಧಿಸೂಚನೆಯಲ್ಲಿ ಹೊರಡಿಸಿದ ಸ್ಥಳದಲ್ಲಿ ಮಾರ್ಚ್ 28 ರಿಂದ ಏಪ್ರಿಲ್ 4 ರವರೆಗೆ ಸಾರ್ವತ್ರಿಕ ರಜಾ ದಿನಗಳಾದ ಮಾರ್ಚ್ 29 ರ ಗುಡ್ ಫ್ರೈಡೆ ಹಾಗೂ ಮಾ.31ರ ಭಾನುವಾರ ಹೊರತುಪಡಿಸಿ ಉಳಿದ ದಿನಗಳಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅಭ್ಯರ್ಥಿಗಳಿಗೆ ಅರ್ಹತೆ
ನಾಮಪತ್ರ ಸಲ್ಲಿಸುವ ಅಭ್ಯರ್ಥಿಯ ಹೆಸರು ಯಾವುದೇ ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿತವಾಗಿರಬೇಕು. ಅಭ್ಯರ್ಥಿಯು 25 ವರ್ಷ ವಯೋಮಿತಿಯವರಾಗಿದ್ದು, ಭಾರತೀಯ ನಾಗರೀಕರಾಗಿರಬೇಕು. ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಓರ್ವ ಸೂಚಕರನ್ನು ಹೊಂದಲು ಅವಕಾಶವಿದ್ದು, ಈ ಸೂಚಕರು ಸಂಬಂಧಪಟ್ಟ ಲೋಕಸಭಾ ಕ್ಷೇತ್ರದ ಮತದಾರರಾಗಿರಬೇಕು. ನೋಂದಾಯಿತ ರಾಜಕೀಯ ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳಿಗೆ 10 ಜನ ಸೂಚಕರು ಕಡ್ಡಾಯವಾಗಿ ಇರಬೇಕು. ಎಲ್ಲಾ ಸೂಚಕರು ಸಂಬಂಧಪಟ್ಟ ಲೋಕಸಭಾ ಕ್ಷೇತ್ರದ ಮತದಾರರಾಗಿರಬೇಕು ಎಂದು ತಿಳಿಸಿದರು.
ಓರ್ವ ಅಭ್ಯರ್ಥಿಯು ಗರಿಷ್ಠ 4 ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿದ್ದು, ಒಂದು ನಾಮಪತ್ರದ ಜೊತೆ ಪೂರ್ಣ ಪ್ರಮಾಣದ ದಾಖಲಾತಿ ನೀಡಿದಲ್ಲಿ ಉಳಿಕೆ ನಾಮಪತ್ರಗಳಿಗೆ ಕೇವಲ ನಾಮಪತ್ರ ಮಾತ್ರ ಸಲ್ಲಿಸಿದರೆ ಸಾಕು ಎಂದು ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ನಂತರ ಅಭ್ಯರ್ಥಿಯು ಪ್ರಮಾಣ ಸ್ವೀಕರಿಸಬೇಕು. ಅಭ್ಯರ್ಥಿಯು ಪ್ರಮಾಣವನ್ನು ಸ್ವೀಕರಿಸಲು ಹಾಗೂ ಮತದಾರರ ಪಟ್ಟಿಯ ದೃಢೀಕೃತ ನಕಲು ಸಲ್ಲಿಸಲು ಏಪ್ರಿಲ್ 4ರವರೆಗೆ ಅವಕಾಶವಿರುತ್ತದೆ. ಠೇವಣಿ ಹಣವನ್ನು ಸಾಮಾನ್ಯ ಅಭ್ಯರ್ಥಿಗೆ 25,000/- ರೂ., ಪ.ಜಾತಿ/ಪ.ಪಂಗಡದ ಅಭ್ಯರ್ಥಿಗೆ 12,500/- ರೂ.ಗಳಿಗೆ ನಿಗಧಿಪಡಿಸಲಾಗಿದೆ. ಇದನ್ನು ಚುನಾವಣಾಧಿಕಾರಿಗಳ ಕಛೇರಿಯಲ್ಲಿ ನಗದಾಗಿ ನೀಡಿ ರಸೀದಿ ಪಡೆಯಬೇಕು. ಈ ರಸೀದಿ ಹಾಗೂ ಅಭ್ಯರ್ಥಿಯ ಜಾತಿ ಪ್ರಮಾಣ ಪತ್ರವನ್ನು ನಾಮಪತ್ರದೊಂದಿಗೆ ಲಗತ್ತಿಸಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
ನಾಮಪತ್ರವನ್ನು ಅಭ್ಯರ್ಥಿಗಳು ಆನ್‌ಲೈನ್ ಮೂಲಕವೂ (https://suvidha.eci.gov.in) ಸಹ ಸಲ್ಲಿಸಬಹುದು. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಒಬ್ಬ ಅಭ್ಯರ್ಥಿಯ ಜೊತೆ 4 (ನಾಲ್ಕು) ಜನಕ್ಕೆ ಮಾತ್ರ ಚುನಾವಣಾಧಿಕಾರಿಗಳ ಕೊಠಡಿಯ ಒಳಗೆ ಪ್ರವೇಶಾವಕಾಶವಿರುತ್ತದೆ. ನಾಮಪತ್ರವನ್ನು ಅಭ್ಯರ್ಥಿ ಅಥವಾ ಸೂಚಕ ಸಲ್ಲಿಸಲು ಅವಕಾಶವಿರುತ್ತದೆ. ನಾಮಪತ್ರ ಸಲ್ಲಿಸಿದ ನಂತರ ಅಭ್ಯರ್ಥಿ ಪ್ರಮಾಣ ಸ್ವೀಕರಿಸಬೇಕು. ಪರಿಷ್ಕೃತ ನಮೂನೆ-26 ನ್ನು (ರೂ.20/- ಗಳ ಛಾಪಾ ಕಾಗದದಲ್ಲಿ) ಕೂಲಂಕುಷವಾಗಿ ಪರಿಶೀಲಿಸಿ, ಅದರಲ್ಲಿನ ಎಲ್ಲಾ ಕಾಲಂ ಗಳನ್ನೂ ಭರ್ತಿ ಮಾಡಿರತಕ್ಕದ್ದು.
ಚುನಾವಣಾಧಿಕಾರಿಗಳ ಕಛೇರಿಯ 100 ಮೀ. ವ್ಯಾಪ್ತಿಯ ಪ್ರದೇಶವನ್ನು ಗುರ್ತಿಸಿ, ಸಿ.ಆರ್.ಪಿ.ಸಿ. 144 ರನ್ವಯ ನಿರ್ಬಂಧಕಾಜ್ಞೆ ಹೊರಡಿಸಲಾಗುವುದು ಹಾಗೂ ಕೇವಲ ಅಭ್ಯರ್ಥಿ ಮತ್ತು 4 ಜನಕ್ಕೆ (ಒಟ್ಟು 5 ಜನ) ಮಾತ್ರ ಪ್ರವೇಶಿಸಲು ಅವಕಾಶವಿರುತ್ತದೆ. ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳು ಅಭ್ಯರ್ಥಿಗಳು ಫಾರಂ-ಎ ಮತ್ತು ಫಾರಂ-ಬಿ ಗಳನ್ನು ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಅಂದರೆ ಏಪ್ರಿಲ್ 4 ರಂದು ಮಧ್ಯಾಹ್ನ 3 ಗಂಟೆಯ ಒಳಗಾಗಿ ಸಲ್ಲಿಸಬೇಕು. ಫಾರಂ-26 ನಲ್ಲಿ ಖಾಲಿ ಇರುವ ಸ್ಥಳಗಳನ್ನು ತುಂಬಲು ಏಪ್ರಿಲ್ 5 ರಂದು ಬೆಳಿಗ್ಗೆ 11 ಗಂಟೆಯವರೆಗೆ ಅವಕಾಶವಿರುತ್ತದೆ. ನಾಮಪತ್ರದ ಜೊತೆ ಇತ್ತೀಚಿನ ಅಂದರೆ ಮೂರು ತಿಂಗಳೊಳಗಿನ ಭಾವಚಿತ್ರವನ್ನು ಲಗತ್ತಿಸಬೇಕು. 2*2.5 ಸೆ.ಮೀ ಇದ್ದು, ಹಿಂಭಾಗದಲ್ಲಿ ಬಿಳಿ ಬಣ್ಣದ್ದಾಗಿರಬೇಕು. ಭಾವಚಿತ್ರ ಕಪ್ಪು ಬಿಳುಪು ಅಥವಾ ಕಲರ್ ಆಗಿರಬಹುದು. ಆದರೆ ಕ್ಯಾಪ್, ಹ್ಯಾಟ್, ಡಾರ್ಕ್ ಸನ್‌ಗ್ಲಾಸಸ್, ಯೂನಿಫಾರಂ ಇರುವ ಭಾವಚಿತ್ರಗಳಿಗೆ ಅವಕಾಶವಿರುವುದಿಲ್ಲ. ಇದಕ್ಕಾಗಿ ಅಭ್ಯರ್ಥಿಯಿಂದ ಒಂದು ನಿಗದಿಪಡಿಸಿದ ಡಿಕ್ಲರೇಷನ್ ಆರ್.ಒ., ಕೈಪಿಡಿಯ ಪುಟಸಂಖ್ಯೆ 50 (ಆಂಗ್ಲ ಭಾಷೆ) ರಲ್ಲಿ ಸೂಚಿಸಿದಂತೆ ಪಡೆದುಕೊಳ್ಳಬೇಕು. ಓರ್ವ ಸೂಚಕ ಒಂದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳಿಗೆ ಸೂಚಕರಾಗಿ ಸಹಿ ಮಾಡಬಹುದು. ಅಭ್ಯರ್ಥಿ ಸಹಿ ಮಾಡಲು ಸಾಧ್ಯವಾಗದಿದ್ದಲ್ಲಿ ಹೆಬ್ಬೆಟ್ಟಿನ ಸಹಿ ಹಾಕಬಹುದು. ಇದನ್ನು ಚುನಾವಣಾಧಿಕಾರಿಗಳು ಅಥವಾ ಉಪವಿಭಾಗಾಧಿಕಾರಿಗಳ ಮುಂದೆ ಮಾತ್ರ ದಾಖಲಿಸಬೇಕು.
ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಕ್ರಿಮಿನಲ್ ಮೊಕದ್ದಮೆ ಇದ್ದಲ್ಲಿ ಅದನ್ನು ಟಿ.ವಿ. ಮತ್ತು ದಿನಪತ್ರಿಕೆಗಳಲ್ಲಿ ಪ್ರಚುರಪಡಿಸಬೇಕು. ಇದನ್ನು ಫಾರಂ ಸಿ-1 ರಲ್ಲಿ ಮೂರು ಬಾರಿ ಪ್ರಚಾರ ಅವಧಿಯಲ್ಲಿ ಪ್ರಚುರ ಪಡಿಸಬೇಕು.
ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಚುನಾವಣಾ ಏಜೆಂಟ್ ನೇಮಕಾತಿ ದಾಖಲೆಗಳನ್ನು ಅಂದರೆ ಫಾರಂ-8 ನ್ನು ದ್ವಿಪ್ರತಿಯಲ್ಲಿ ನೀಡಬೇಕು. ಫಾರಂ-8 ರಲ್ಲಿ ಚುನಾವಣಾ ಏಜೆಂಟರ ಫೋಟೋ ಲಗತ್ತಿಸಬೇಕು. ಮಂತ್ರಿಗಳು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಭದ್ರತಾ ಸಿಬ್ಬಂದಿಯ ಭದ್ರತೆ ಪಡೆದ ಯಾವುದೇ ವ್ಯಕ್ತಿ ಚುನಾವಣಾ ಏಜೆಂಟ್ ಹಾಗೂ ಎಣಿಕೆ ಏಜೆಂಟ್ ಆಗಲು ಅವಕಾಶವಿರುವುದಿಲ್ಲ. ಪ್ರತಿಯೊಬ್ಬ ಅಭ್ಯರ್ಥಿಗೆ ಗರಿಷ್ಠ ರೂ. 95,00,000/- ಗಳವರೆಗೆ ಚುನಾವಣಾ ವೆಚ್ಚ ಮಾಡಲು ಅವಕಾಶವಿರುತ್ತದೆ ಮತ್ತು ಸಮರ್ಪಕ ವೆಚ್ಚಗಳ ಮಾಹಿತಿಗಳನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
ಬಿಎಲ್‌ಒ ಗಳು ಪಿಡಬ್ಲೂö್ಯಡಿ ಮತ್ತು 85+ ಮತದಾರರಿಗೆ ಅವರ ಮನೆಗಳಿಗೆ ತೆರಳಿ ನಮೂನೆ-12ಡಿ ಗಳನ್ನು ಹಂಚಿಕೆ ಮಾಡುತ್ತಿದ್ದಾರೆ. ಸದರಿ ಮತದಾರರು ಅಂಚೆ ಮತಪತ್ರಗಳ ಮೂಲಕ ಮತಚಲಾಯಿಸಲು ಇಚ್ಛೆಪಟ್ಟಲ್ಲಿ, ನಮೂನೆ-12ಡಿ ಗಳಲ್ಲಿ ಅರ್ಜಿ ಸಲ್ಲಿಸಿದಲ್ಲಿ ಅಂಚೆ ಮತಪತ್ರಗಳನ್ನು ಹಂಚಿಕೆ ಮಾಡಲಾಗುವುದು. ನಮೂನೆ-12ಡಿ ರಲ್ಲಿ ಅಂಚೆ ಮತಪತ್ರಗಳ ಮೂಲಕ ಮತ ಚಲಾಯಿಸಲು ಇಚ್ಛೆಪಟ್ಟ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಪೋಸ್ಟಲ್ ಬ್ಯಾಲೆಟ್ ಎಂದು ಗುರುತು ಮಾಡಲಾಗುವುದು. ಸದರಿ ಮತದಾರರಿಗೆ ಮತದಾನ ದಿನದಂದು ಮತಗಟ್ಟೆಗಳಿಗೆ ತೆರಳಿ ಮತದಾರರ ಮಾಡಲು ಅವಕಾಶವಿರುವುದಿಲ್ಲ. ಆದ್ದರಿಂದ, ಪಿಡಬ್ಲೂö್ಯಡಿ ಮತ್ತು 85+ ಮತದಾರರು ನಮೂನೆ-12ಡಿ ಯಲ್ಲಿ ಅರ್ಜಿ ಸಲ್ಲಿಸುವ ಮೊದಲೇ ನಿರ್ಧರಿಸಬೇಕಾಗಿರುತ್ತದೆ.
ಪ್ರಜಾಪ್ರತಿನಿಧಿ ಕಾಯ್ದೆ 1951 ಕಲಂ 127ಎ ರನ್ವಯ ಪ್ರಿಂಟಿಂಗ್ ಪ್ರೆಸ್ ನವರು ಚುನಾವಣಾ ಕರಪತ್ರಗಳನ್ನು ಮುದ್ರಣ ಸಂದರ್ಭದಲ್ಲಿ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಹಾಗೂ ಚುನಾವಣಾ ಕರಪತ್ರದಲ್ಲಿ ಮುದ್ರಕರ ಹೆಸರು, ಪ್ರಕಾಶಕರ ಹೆಸರು, ಹಾಗೂ ಮುದ್ರಣ ಮಾಡಿದ ಪ್ರಮಾಣದ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು.
ನೋಂದಣಿಯಾಗದ ಸ್ಥಳೀಯ ಪತ್ರಿಕೆಗಳಿಗೂ ಸಹ ಜಿಲ್ಲೆ/ತಾಲ್ಲೂಕಿನ ಸಾಮಾನ್ಯ ದರಗಳನ್ನು ನಿಗದಿಪಡಿಸಲಾಗುವುದು. ಕೇಬಲ್ / ಸ್ಥಳೀಯ ಟಿ.ವಿ. ಆಪರೇಟರ್‌ಗಳು ಎಂ.ಸಿ.ಎಂ.ಸಿ., ವಿಭಾಗ ಪೂರ್ವಾನುಮತಿ ಪಡೆಯದ ಯಾವುದೇ ಚುನಾವಣಾ ಸಂಬಂಧಿತ ಅಭ್ಯರ್ಥಿ/ಪಕ್ಷದ ಜಾಹೀರಾತುಗಳನ್ನು ಪ್ರಸಾರ ಮಾಡಲು ಅವಕಾಶವಿರುವುದಿಲ್ಲ. ಎಲ್ಲಾ ಪ್ರಿಂಟಿಂಗ್ ಪ್ರೆಸ್‌ನವರು, ಕೇಬಲ್/ಟಿ.ವಿ. ಆಪರೇಟರ್‌ಗಳು ಭಾರತ ಚುನಾವಣಾ ಆಯೋಗದ ಆದೇಶ ಮತ್ತು ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವುದು.
ಯಾವುದೇ ಸಭೆ, ಸಮಾರಂಭಗಳಿಗೆ ಹಾಗೂ ಇತರೆ ರಾಜಕೀಯ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಚುನಾವಣಾಧಿಕಾರಿ/ಸಹಾಯಕ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.
ಚುನಾವಣೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಈ ಕೆಳಕಂಡ ಆಪ್‌ಗಳನ್ನು ಬಳಸಲಾಗುತ್ತಿದೆ.
Voter Help Line App :
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ ಮತ್ತು ಕೈಬಿಡತಕ್ಕ ಪ್ರಕರಣಗಳಲ್ಲಿ ನಮೂನೆ-6, 7, 8 ಅರ್ಜಿಗಳನ್ನು ಸಲ್ಲಿಸಲು ಮತ್ತು ಮತದಾರರ ಪಟ್ಟಿಯಲ್ಲಿ ಹೆಸರು ಇತ್ಯಾದಿ ವಿವರಗಳನ್ನು ಪರಿಶೀಲನೆ ಮಾಡಿಕೊಳ್ಳುವುದು. ಡಿಜಿಟಲ್ ವೋಟರ್ ಸ್ಲಿಪ್ ಡೌನ್ ಲೋಡ್ ಮಾಡಿಕೊಳ್ಳಬಹುದು.
C-vigil App :
ಸಾರ್ವಜನಿಕರು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲು ಮಾಡಲು ಸಿ-ವಿಜಿಲ್ ಆಪ್ ಬಳಸಬಹುದು.
Suvidha App :
ರಾಜಕೀಯ ಪಕ್ಷಗಳವರು/ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು, ಪರಿಶೀಲಿಸಲು ಹಾಗೂ
ರಾಜಕೀಯ ಸಭೆ, ಸಮಾರಂಗಳಿಗೆ ಅನುಮತಿ ಪಡೆಯಲು ಬಳಸಿಕೊಳ್ಳಬಹುದು.
Saksham App :
ವಿಕಲಚೇತನ ಮತದಾರರಿಗೆ ಅನುಕೂಲವಾಗುವಂತೆ ವೀಲ್‌ಛೇರ್‌ಗಾಗಿ ಕೋರಿಕೆ ಸಲ್ಲಿಸಲು ಬಳಸಬಹುದು.
KYC App :
ಅಭ್ಯರ್ಥಿಗಳ ಹೆಸರುಗಳ ಮೂಲಕ ಅಭ್ಯರ್ಥಿಗಳ ವಿವರವಾದ ಮಾಹಿತಿ ಪಡೆಯಬಹುದು
ಅಭ್ಯರ್ಥಿಗಳ ಕ್ರಿಮಿನಲ್ ಮೊಕದ್ದಮೆಗಳ ಬಗ್ಗೆ ಮಾಹಿತಿ ಪಡೆಯಲು ಬಳಸಿಕೊಳ್ಳಬಹುದು
Voter turnout App :
Voter turnout percentage ಮಾಡಿಕೊಳ್ಳಬಹುದು.
ಎಣಿಕೆ ಪ್ರಗತಿಯ ಮಾಹಿತಿ ಪಡೆದುಕೊಳ್ಳಬಹುದು.