ತುಮಕೂರು | ತುಮಕೂರು (Tumkur) ಲೋಕಸಭೆಯ (Lok Sabha) ಕಾಂಗ್ರೆಸ್ ಟಿಕೆಟ್ (Congress ticket) ಇತ್ತೀಚಿಗಷ್ಟೇ ಕಾಂಗ್ರೆಸ್ ಸೇರ್ಪಡೆಯಾದ ಎಸ್ ಪಿ ಮುದ್ದಹನುಮೇಗೌಡರಿಗೆ (SP Muddahanumegowda) ಫಿಕ್ಸ್ ಆಗಿದೆ. ಇದರ ಬೆನ್ನಲ್ಲೇ ಮೂಲ ಕಾಂಗ್ರೆಸ್ಸಿಗರಾಗಿ ಗುರುತಿಸಿಕೊಂಡಿದ್ದ ಕೆಲವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದ ಹಲವರು ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಈ ಬೆನ್ನಲ್ಲೆ ತುಮಕೂರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಸಹಕಾರ ಸಚಿವ ಕೆ ಎನ್ ರಾಜಣ್ಣ (KN Rajanna), ತುಮಕೂರಿನಲ್ಲಿ ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಲಾಗಿದೆ. ನನ್ನ ಉಸ್ತುವಾರಿ ಹಾಸನದಲ್ಲಿ ಶ್ರೇಯಸ್ ಪಟೇಲ್ ಗೆ ಟಿಕೆಟ್ ಸಿಕ್ಕಿದೆ. ತುಮಕೂರಿನಲ್ಲೂ ಗೆಲ್ಲುತ್ತೇವೆ ಹಾಸನದಲ್ಲೂ ಗೆಲ್ಲುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಪಕ್ಷ ಚುನಾವಣೆ ಎಂದ ಮೇಲೆ ಆಕಾಂಕ್ಷಿಗಳು ಇದ್ದೇ ಇರುತ್ತಾರೆ. ಟಿಕೆಟ್ ಘೋಷಣೆ ಆದಮೇಲೆ ಅಸಮಾಧಾನ ಅವರಲ್ಲಿ ಇದ್ದೇ ಇರುತ್ತದೆ. ಇದೆಲ್ಲವನ್ನು ಸರಿಪಡಿಸಿಕೊಂಡು ಮುಂದೆ ಹೋಗುತ್ತೇವೆ. ಹೈಕಮಾಂಡ್ ತೀರ್ಮಾನವನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಹೇಳಿದರು.
ಜನ ಮುದ್ದಹನುಮೇಗೌಡ ಒಳ್ಳೆಯವರು ಅಂತಾರೆ ಹಾಗಾಗಿ ಅವರು ಈ ಚುನಾವಣೆಯಲ್ಲಿ ಗೆಲ್ಲುತ್ತಾರೆ. ಜೊತೆಗೆ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನು ಜನ ಮರೆತಿಲ್ಲ. ಇದೆಲ್ಲವೂ ಕೂಡ ತುಮಕೂರು ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಸಹಕಾರಿಯಾಗಲಿದೆ ಎಂದರು.
ಜೆಡಿಎಸ್ ನಾಯಕರಿಗೆ ಕೆ ಎನ್ ರಾಜಣ್ಣ ಟಾಂಗ್
ಹಾಸನ ಕ್ಷೇತ್ರ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠಿತ ಕ್ಷೇತ್ರವಾಗಿದೆ. ಯಾಕೆಂದರೆ ಜಾತ್ಯಾತೀತ ಅಂದುಕೊಂಡು ಅತೀ ಜಾತಿ ಮಾಡುತ್ತಾರೆ. ಅವರನ್ನು ಸೋಲಿಸೋದು ಕಾಂಗ್ರೆಸ್ ಗೆ ಪ್ರತಿಷ್ಠೆ. ಎಂದು ಪರೋಕ್ಷವಾಗಿ ಜೆಡಿಎಸ್ ನಾಯಕರಿಗೆ ಕೆ ಎನ್ ರಾಜಣ್ಣ ತಿರಗೇಟು ಕೊಟ್ಟಿದ್ದಾರೆ.
ಇನ್ನೂ ತುಮಕೂರು ಲೋಕಸಭೆ ಟಿಕೆಟ್ ಘೋಷಣೆಯ ಬೆನ್ನಲ್ಲೇ ಅಸಮಾಧಾನವನ್ನು ಮುರುಳಿಧರ ಹಾಲಪ್ಪ ವ್ಯಕ್ತಪಡಿಸಿದ್ದು ಇದೆಲ್ಲವನ್ನು ಪಕ್ಷದ ಹೈಕಮಾಂಡ್ ನೋಡಿಕೊಳ್ಳಲಿದೆ. ಎಲ್ಲರನ್ನು ಸಂಭಾಳಿಸಿಕೊಂಡು ಚುನಾವಣೆಯನ್ನು ಎದುರಿಸುತ್ತೇವೆ, ಗೆಲುವು ಪಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.