ತುಮಕೂರು | ತುಮಕೂರು (Tumkur) ಜಿಲ್ಲೆಗೆ ಹೇಮಾವತಿ ಜಲಾಶಯದಿಂದ (Hemavati Reservoir) ಹರಿಯುವ ನೀರನ್ನು (water) ಅನಧಿಕೃತವಾಗಿ ಹೊಲ, ಗದ್ದೆ, ತೋಟಗಳಿಗೆ ಬಳಕೆ ಮಾಡದಂತೆ ಇದೀಗ ಜಿಲ್ಲಾಧಿಕಾರಿ ಶುಭಕಲ್ಯಾಣ್ (ShuBha Kalyan) ಜಿಲ್ಲೆಯ ಜನರಿಗೆ ತಿಳಿಸಿದ್ದಾರೆ.
2023-24 ನೇ ಸಾಲಿನಲ್ಲಿ ಹೇಮಾವತಿ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಬರೀ ಕುಡಿಯುವ ನೀರಿಗಾಗಿ ಮಾತ್ರ ಮೀಸಲಿಡಲಾಗಿದೆ. 2024ರ ವರ್ಷದ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿಗೆ ಅಭಾವವಾಗದಂತೆ ಮುಂಜಾಗ್ರತ ಕ್ರಮಗಳನ್ನು ಕೂಡ ಕೈಗೊಳ್ಳಲು ಹೇಮಾವತಿ ನಾಲಾ ಜಾಲಕ್ಕೆ ಸಂಬಂಧಿಸಿದ ಕೆರೆ ಕಟ್ಟೆಗಳನ್ನು ತುಂಬಿಸಲು ಹೇಮಾವತಿ ಜಲಾಶಯದಿಂದ ನೀರನ್ನು ಮಾರ್ಚ್ 12ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದರಂತೆ ತುಮಕೂರು ಶಾಖಾ ನಾಲೆ ಸರಪಳಿ 70 ಕಿ.ಮೀ ನಿಂದ 145 ಕಿ. ಮೀ ವರೆಗೆ ಹೇಮಾವತಿ ನೀರನ್ನು ಹರಿಸಲು ಉದ್ದೇಶಿಸಲಾಗಿದೆ. ಪ್ರಸ್ತುತ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಕೆರೆಗಳಿಗೆ ನೀರನ್ನು ಹರಿಸಲು ಆದೇಶ ಮಾಡಲಾಗಿದೆ.
ತುಮಕೂರು ಜಿಲ್ಲೆಯ ತುಮಕೂರು, ಗುಬ್ಬಿ, ತುರುವೇಕೆರೆ ಹಾಗೂ ತಿಪಟೂರು ತಾಲೂಕುಗಳಲ್ಲಿ ಹೇಮಾವತಿ ನಾಲೆಯ ಮೂಲಕ ನೀರನ್ನು ಹರಿಸಲಾಗುವುದರಿಂದ ನಾಲೆಯ ಭಾಗದ ಜನರು ಅನಧಿಕೃತವಾಗಿ ಜಮೀನು, ತೋಟಗಳಿಗೆ ನೀರು ಹರಿಸಿಕೊಳ್ಳುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ನಾಲೆಯ ಸುತ್ತಲೂ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ನಾಶಪಡಿಸಿದಂತೆ ತಡೆಗಟ್ಟಲು ನಾಲೆಯ ಸುರಕ್ಷತೆಯ ದೃಷ್ಟಿಯಿಂದ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಈಗಾಗಲೇ ಬರದ ಪರಿಸ್ಥಿತಿ ಆವರಿಸಿದ್ದು ಜಿಲ್ಲೆಯ ಜನರ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಬಾರದಂತೆ ಈಗಿರುವ ಹೇಮಾವತಿ ಜಲಾಶಯದಲ್ಲಿನ ನೀರನ್ನು ಕುಡಿಯಲು ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ತುಮಕೂರು ಜಿಲ್ಲೆಗೆ ಹರಿದು ಬರುವಂತಹ ನೀರು ಪೋಲಾಗದಂತೆ ತಡೆಯಲು ಹೊಲ, ತೋಟ, ಗದ್ದೆಗಳಿಗೆ ಹರಿಸದಂತೆ ನಾಲೆಯ ಉದ್ದಕ್ಕೂ ಎಡ ಮತ್ತು ಬಲಭಾಗದ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಒಂದು ವೇಳೆ ಅನಧಿಕೃತವಾಗಿ ಬಳಕೆ ಮಾಡಿಕೊಂಡರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.