ತುಮಕೂರು | ಮಾರ್ಚ್ 22 ರಂದು ತುಮಕೂರು (Tumkur) ಜಿಲ್ಲೆಯ ಕೋರ ಪೊಲೀಸ್ ಠಾಣಾ (Police Station) ವ್ಯಾಪ್ತಿಯ ಕುಚ್ಚಂಗಿ ಕೆರೆಯಲ್ಲಿ (Kuchchangi lake) ಒಂದೇ ಕಾರಿನಲ್ಲಿ ಮೂರು ಮನುಷ್ಯರ ಮೃತದೇಹಗಳು (dead body) ಸುಟ್ಟ ಸ್ಥಿತಿಯಲ್ಲಿ ಪತಿಯಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಘಟನೆಯ ಸಂಪೂರ್ಣ ಮಾಹಿತಿಯನ್ನು ಮಾದ್ಯಮಗಳಿಗೆ ನೀಡಿದ್ದಾರೆ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಅಶೋಕ್ (Ashok).
ತುಮಕೂರು ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೂರು ಮಂದಿ ಹತ್ಯೆಯಾದ ವ್ಯಕ್ತಿಗಳು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಇಶಾಕ್ ಸೀಮಮ್ (54), ಶಾಹುಲ್ ಹಮೀದ್ (45), ಸಿದ್ದಿಕ್ (34) ದುರ್ದೈವಿಗಳಾಗಿದ್ದಾರೆ.
ತುಮಕೂರಿನ ಶಿರಾ ಗೇಟ್ ನಲ್ಲಿ ವಾಸವಿದ್ದ ಪಾತರಾಜು ಅಥವಾ ರಾಜಗುರು (35) ಎಂಬ ಹೆಸರಿನ ವ್ಯಕ್ತಿಯು ಕಳೆದ ಸುಮಾರು 6-7 ತಿಂಗಳಿನಿಂದ ನಿಧಿ ಹುಡುಕುವ ಕೆಲಸ ಮಾಡುತ್ತಿದ್ದರು. ನಿಧಿಗಾಗಿ ಮೃತರು ರಾಜ ಗುರುವಿಗೆ ಸುಮಾರು 6 ಲಕ್ಷ ರೂ ಹಣವನ್ನು ನೀಡಿದ್ದರು. ಹಣ ನೀಡಿ 6 ತಿಂಗಳು ಕಳೆದರೂ ನಿಧಿ ಹುಡುಕಿ ಕೊಟ್ಟಿಲ್ಲವಾದ್ದರಿಂದ ಹಣ ವಾಪಸ್ಸು ಕೊಡುವಂತೆ ಒತ್ತಾಯ ಮಾಡಿದ್ದರು. ಇಲ್ಲದಿದ್ದರೆ ಪೊಲೀಸರಿಗೆ ದೂರು ಕೊಡುವ ಎಚ್ಚರಿಕೆಯನ್ನು ನೀಡಿದ್ದರು.
ಇವರನ್ನು ಹೇಗಾದರೂ ಕೊಲೆ ಮಾಡಬೇಕೆಂದು ಪಾತರಾಜು ತನಗೆ ಪರಿಚಯದವರಾದ ಸತ್ಯಮಂಗಲದ ವಾಸಿ ಗಂಗರಾಜು (35) ಆತನ ಸಹಚರರಾದ ಮಧುಸೂದನ್ (24), ಕೃಷ್ಣ (22), ಗಣೇಶ (19), ಕಿರಣ್ (23), ಸೈಮನ್ (18) ಇವರನ್ನು ಸೇರಿಸಿಕೊಂಡು ಮೂರು ಜನರನ್ನು ಕೊಲೆ ಮಾಡಿದ್ದಾರೆ.
ಮೃತರಿಗೆ ಮೂರು ಕೆಜಿ ಚಿನ್ನ ಕೊಡುವ ಆಮಿಷವೊಡ್ಡಿ ಕೊಲೆ ಮಾಡುವ ಹಿಂದಿನ ದಿನ ಸಂಚುರೂಪಿಸಿ ಬೆಳಗಿನ ಜಾವ 12 ಗಂಟೆ ಸುಮಾರಿಗೆ ಚಿನ್ನ ನೀಡುವುದಾಗಿ ಬೀರನಕಲ್ಲು ಬೆಟ್ಟದ ಸಮೀಪಕ್ಕೆ ಕರೆಸಿಕೊಂಡು ಅವರುಗಳನ್ನು ಮಚ್ಚು, ಲಾಂಗು ಮತ್ತು ಡ್ರ್ಯಾಗರ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಿ ಅವರ ಕಾರಿನಲ್ಲೇ ಕುಚ್ಚಂಗಿ ಕೆರೆಗೆ ತೆಗೆದುಕೊಂಡು ಹೋಗಿ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.