ತುಮಕೂರು | ಪ್ರಿಯಕರನ ಜೊತೆ ಸೇರಿ ತನ್ನ ಪತಿಯನ್ನೇ ಹತ್ಯೆ ಮಾಡಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ಜೀವಾವಧಿ ಶಿಕ್ಷೆ ನೀಡಿ ತುಮಕೂರಿನ ನ್ಯಾಯಾಲಯ (Tumkur court) ಆದೇಶ ಹೊರಡಿಸಿದೆ. ಅಕ್ರಮ ಸಂಬಂಧ ಬಗ್ಗೆ ತಿಳಿದಿದ್ದ ತನ್ನ ಪತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಹಾಗೂ ಆತನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು.
ತುಮಕೂರು ನಗರದ ಗೋಕುಲ-ಬಡ್ಡಿಹಳ್ಳಿ ವ್ಯಾಪ್ತಿಯಲ್ಲಿ ವಾಸವಿದ್ದ ಜಿ. ನಾರಾಯಣ ಅವರಿಗೆ ತನ್ನ ಪತ್ನಿ ಅನ್ನಪೂರ್ಣ, ರಾಮಕೃಷ್ಣ ಎಂಬಾತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದು ತಿಳಿದಿತ್ತು. ಈ ವಿಚಾರವಾಗಿ ಜಗಳ ಕೂಡ ನಡೆದಿತ್ತು. ಈ ವಿಚಾರವನ್ನು ಅನ್ನಪೂರ್ಣ ರಾಮಕೃಷ್ಣನಿಗೆ ತಿಳಿಸಿದ್ದಳು. ಅಲ್ಲದೆ ನಾರಾಯಣನನ್ನು ಕೊಲೆ ಮಾಡಲು ಸಂಚು ಕೂಡ ರೂಪಿಸಿದ್ದಳು.
ಘಟನೆಯ ವಿವರ
2021 ರ ಸೆಪ್ಟೆಂಬರ್ 12 ರಂದು ಮಧ್ಯಾಹ್ನ 12 ಗಂಟೆಯ ಸಮಯದಲ್ಲಿ ನಾರಾಯಣ ತನ್ನ ಮನೆಯ ಹಾಲ್ನಲ್ಲಿ ಕುಳಿತಿದ್ದಾಗ ಅನ್ನಪೂರ್ಣ ತನ್ನ ಪತಿ ನಾರಾಯಣ ಮೇಲೆ ಪ್ಲಾಸ್ಟಿಕ್ ಜಗ್ನಲ್ಲಿ ಪೆಟ್ರೋಲ್ ತಂದು ಸುರಿದು ಬೆಂಕಿ ಹಚ್ಚಿದ್ದಳು. ಈ ಬೆಂಕಿಯ ಉರಿ ತಡೆಯಲಾಗದೆ ಮನೆಯಿಂದ ಹೊರಗೆ ಓಡಿಬಂದ ನಾರಾಯಣ ಪಕ್ಕದಲ್ಲೇ ಇದ್ದ ಚರಂಡಿಗೆ ಬಿದ್ದಿದ್ದನು. ಇವರನ್ನು ಹಿಂಬಾಲಿಸಿಕೊಂಡು ಬಂದ ರಾಮಕೃಷ್ಣ ಅವರ ತಲೆ ಮೇಲೆ ಕಲ್ಲುಗಳನ್ನು ಎತ್ತಿ ಹಾಕಿ ಕೊಲೆ ಮಾಡಿದ್ದನು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಜಯನಗರ ಪೊಲೀಸರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳಿಗೆ ನ್ಯಾಯಾಧೀಶರಾದ ಎಚ್. ಅನಂತ್ ಅವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು 30 ಸಾವಿರ ದಂಡ ವಿದಿಸಿ ಆದೇಶ ಹೊರಡಿಸಿದ್ದರು.