ತುಮಕೂರು | ತನ್ನ ತಮ್ಮನನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದ ಆರೋಪಿಗೆ ಇದೀಗ ತುಮಕೂರಿನ ನ್ಯಾಯಾಲಯ (Tumkur court) ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ ದಂಡವನ್ನು ವಿಧಿಸಿ ಆದೇಶ ಹೊರಡಿಸಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಉದ್ದೆಹೊಸಕೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಆರೋಪಿ ಮೋಹನ್ ತಮ್ಮನಾದ ಉಮೇಶ್ ನನ್ನು ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದನು.
ಮೋಹನ್ ಮನೆಯವರ ಮೇಲೆ “ನನಗೆ ಒಳ್ಳೆ ಹುಡುಗಿ ನೋಡಿ ಮದುವೆ ಮಾಡಲಿಲ್ಲ, ನನ್ನ ಜೀವನ ಹಾಳು ಮಾಡಿದ್ದೀರಾ. ನಿಮ್ಮನ್ನು ಸಾಯಿಸುತ್ತೇನೆ.” ಎಂದು ಆಗಾಗ್ಗೆ ಜಗಳ ಮಾಡುತ್ತಿದ್ದನು. ಈ ವಿಚಾರದಲ್ಲಿ ಮೋಹನನಿಗೂ ಅವನ ತಮ್ಮ ಉಮೇಶ ಮತ್ತು ತಂದೆ ಮಲ್ಲಯ್ಯ ಅವರಿಗೂ ಹಲವು ಬಾರಿ ಗಲಾಟೆ ನಡೆದಿತ್ತು.
2021 ರ ಮೇ 11ರಂದು ರಾತ್ರಿ 12 ಗಂಟೆಯಲ್ಲಿ ಉಮೇಶನು ಮಲಗಿದ್ದಾಗ ಆರೋಪಿ ಮೋಹನ್ ಅಲ್ಲಿಗೆ ಬರುತ್ತಾನೆ. ಇದನ್ನು ಮಲ್ಲಯ್ಯ ನೋಡಿ ಗಲಾಟೆ ಬಿಡಿಸಲು ಬರುತ್ತಾನೆ ಎಂದು ದ್ವೇಷದಿಂದ ಮಚ್ಚಿನಿಂದ ಆತನ ತಮ್ಮನನ್ನು ಹೊಡೆದು ಕೊಲೆ ಮಾಡುತ್ತಾನೆ.
ಅದೇ ಸಮಯದಲ್ಲಿ ಮನೆಯಲ್ಲಿದ್ದ ಆತನ ತಂದೆ ಮಲ್ಲಯ್ಯ ಅವರನ್ನು ಕದ್ದು ಹಿಸುಕಿ ನೇಣು ಹಾಕಿ ಸಾಯಿಸಲು ಪ್ರಯತ್ನ ಮಾಡಿರುತ್ತಾನೆ. ಈ ಬಗ್ಗೆ ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಇನ್ನು ಈ ಕೇಸಿನ ತನಿಕಾಧಿಕಾರಿಯಾದ ಎಫ್ ಕೆ ನದಾಫ್ ಗುಬ್ಬಿ ವೃತ್ತ ಪ್ರಕರಣದ ತನಿಖೆ ನಡೆಸಿ. ತುಮಕೂರಿನ ಆರನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿರುತ್ತಾರೆ. ನ್ಯಾಯಾಲಯ ವಿಚಾರಣೆ ನಡೆಸಿ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಅರುಣ ಮತ್ತು ದೀಪಕ್ ಅವರು ವಾದ ಮಂಡಿಸಿದ್ದಾರೆ.
ಡಿಸೆಂಬರ್ 13 2024 ರಂದು ಆರೋಪಿ ಮೋಹನ್ ಅವರಿಗೆ ನ್ಯಾಯಾಧೀಶರಾದ ಶ್ರೀಮತಿ ಲಡಾಕ್ ಅವರು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಮತ್ತು 50,000 ದಂಡ ಮತ್ತು ಕೊಲೆ ಯತ್ನ ಪ್ರಕರಣದಲ್ಲಿ 10 ವರ್ಷ ಕಾರಾಗೃಹ ಮತ್ತು 25,000 ದಂಡ ವಿಧಿಸಿ ಆದೇಶ ಹೊರಡಿಸಿರುತ್ತಾರೆ.