Thursday, December 12, 2024
Homeಜಿಲ್ಲೆತುಮಕೂರುTumkur Constitution Awareness Record | ಮತ್ತೊಂದು ದಾಖಲೆ ನಿರ್ಮಿಸಲು ಮುಂದಾದ ತುಮಕೂರು..!

Tumkur Constitution Awareness Record | ಮತ್ತೊಂದು ದಾಖಲೆ ನಿರ್ಮಿಸಲು ಮುಂದಾದ ತುಮಕೂರು..!

ತುಮಕೂರು | ಜಿಲ್ಲಾದ್ಯಂತ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾ (Constitution Awareness Jatha) ಕಾರ್ಯಕ್ರಮದ ಪ್ರಯುಕ್ತ 1,35,000 ಏಕ ಬಳಕೆ ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು (Plastic bottle) ಬಳಸಿ “ನಮ್ಮ ಸಂವಿಧಾನ”(Namma Samvidhana) ಎಂಬ ಕನ್ನಡ ಪದದ ವಿಶೇಷ ಆಕೃತಿಯನ್ನು ರಚಿಸುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಲು ತುಮಕೂರು (Tumkur) ಜಿಲ್ಲಾಡಳಿತ ವಿನೂತನ ಹೆಜ್ಜೆ ಇರಿಸಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ (Shubha Kalyan) ತಿಳಿಸಿದರು.

Tumkur DC Visit | ಜಿಲ್ಲೆಯಾದ್ಯಂತ ಜಿಲ್ಲಾಧಿಕಾರಿಗಳ ಧಿಡೀರ್ ಭೇಟಿ : ಸಾರ್ವಜನಿಕರ ಸಮಸ್ಯೆ ಆಲಿಸಿದ ಡಿ ಸಿ ಶುಭ ಕಲ್ಯಾಣ್..! – karnataka360.in

ನಗರದ  ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ  ಸೋಮವಾರ ಸಂಜೆ ಸುದ್ದಿ ಗೋಷ್ಠಿ  ನಡೆಸಿ ಮಾತನಾಡಿದ ಅವರು  ಜನವರಿ 26 ರಿಂದ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಮೂಲಕ ಸಾರ್ವಜನಿಕರಲ್ಲಿ ಸಂವಿಧಾನದ ಮಹತ್ವದ ಬಗ್ಗೆ ವಿನೂತನವಾಗಿ ಅರಿವು ಮೂಡಿಸುವ ಸಲುವಾಗಿ ಈ ಕನ್ನಡ ಪದಗಳ ವಿಶೇಷ ಆಕೃತಿ ಜೋಡಿಸುವ ಪ್ರಯತ್ನ ಮಾಡಲಾಗಿದೆ.  ಸುಮಾರು 305 ವಿದ್ಯಾರ್ಥಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ/ ಸಿಬ್ಬಂದಿ ವರ್ಗದವರು ಸೇರಿ ಫೆಬ್ರವರಿ 4 ರಂದು ಬೆಳಿಗ್ಗೆ 11 ರಿಂದ ರಾತ್ರಿ 7.30 ರವರೆಗೆ ಪ್ಲಾಸ್ಟಿಕ್ ಬಾಟಲಿಗಳನ್ನು ಜೋಡಿಸಿ ವಿಶೇಷ ಆಕೃತಿಯನ್ನು ಅರಳಿಸಿದ್ದಾರೆ ಎಂದು ತಿಳಿಸಿದರು. 

“ನಮ್ಮ ಸಂವಿಧಾನ”   ಕನ್ನಡ ಪದದ ಆಕೃತಿ ರಚಿಸಲು ಮೊದಲಿಗೆ ಕ್ಯಾಡ್ ವಿನ್ಯಾಸದಲ್ಲಿ ತಯಾರಿಸಿ 270 x 40 ಅಡಿ ಅಳತೆಯಲ್ಲಿ ಬಾಟಲಿಗಳನ್ನು ಜೋಡಿಸಲಾಗಿದ್ದು, ಗಿನ್ನಿಸ್ ದಾಖಲೆ ನಿರ್ಮಿಸುವ   ಪ್ರಯತ್ನ ಮಾಡಲಾಗಿದೆ. ಈ ಪ್ರಯತ್ನಕ್ಕೆ ಶ್ರಮಿಸಿದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರಿಗೆ ಅಭಿನಂದನೆ ತಿಳಿಸಿದರು.

ಇದೇ ರೀತಿ ಕ್ರಿಯಾಶೀಲರಾಗಿ, ವಿನೂತನವಾಗಿ ಜಾಥಾ ಕಾರ್ಯಕ್ರಮವನ್ನು ಆಯೋಜಿಸಿ ಜನ ಸಾಮಾನ್ಯರಿಗೆ ಸಂವಿಧಾನದ ಮೂಲಭೂತ ಹಕ್ಕು ಮತ್ತು ಕರ್ತವ್ಯ, ಸಾಮಾಜಿಕ ಸಮಾನತೆ ಬಗ್ಗೆ ಅರಿವು ಮೂಡಿಸಬೇಕು ಹಾಗೂ ಫೆಬ್ರವರಿ 23 ರವರೆಗೆ ನಡೆಯಲಿರುವ ಈ ಜಾಥಾ ಕಾರ್ಯಕ್ರಮದಲ್ಲಿ ಸೃಜನಶೀಲರಾಗಿ  ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯನ್ನು ರಾಜ್ಯದಲ್ಲಿಯೇ ಮೊದಲನೇ ಸ್ಥಾನಕ್ಕೆ ತರಬೇಕೆಂದು   ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. 

ನಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಪ್ರತಿ ಪಂಚಾಯತಿಯಲ್ಲಿಯೂ ಜಾಥಾ ಕಾರ್ಯಕ್ರಮದ ಸ್ತಬ್ಧಚಿತ್ರ ವಾಹನವನ್ನು ಹಬ್ಬದ ವಾತಾವರಣದಲ್ಲಿ ಪೂರ್ಣ ಕುಂಭಗಳಿಂದ ಬರಮಾಡಿಕೊಂಡು ಸಂವಿಧಾನ ರಚನೆಗೆ ಡಾ: ಬಿ.ಆರ್. ಅಂಬೇಡ್ಕರ್ ಅವರ ಶ್ರಮವನ್ನು ಸ್ಮರಿಸುತ್ತಾ ಗೌರವದಿಂದ ಮುಂದಿನ ಗ್ರಾಮ ಪಂಚಾಯತಿಗೆ ಬೀಳ್ಕೊಡಲಾಗುತ್ತಿದೆ.    ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಸ್ಥಳೀಯ ಜನಪ್ರತಿನಿಧಿಗಳೂ ಕೂಡ  ಭಾಗಿಯಾಗುತ್ತಿದ್ದಾರೆ. ಜನರಿಂದಲೂ ಸಹ ಉತ್ತಮವಾದ ಸ್ಪಂದನೆ ದೊರೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ನಮ್ಮೆಲ್ಲರ ಅಸ್ತಿತ್ವವೇ ನಮ್ಮ ಸಂವಿಧಾನ.  ಮಗುವಿನಿಂದ ಹಿಡಿದು ವೃದ್ಧರಾದಿಯಾಗಿ ಎಲ್ಲರಿಗೂ ಸಂವಿಧಾನದ ಮೂಲ ಸ್ವರೂಪವನ್ನು ತಿಳಿಸಬೇಕೆನ್ನುವ ದೃಷ್ಟಿಯಿಂದ  ಸಂಚರಿಸುತ್ತಿರುವ  ಜಾಗೃತಿ ಜಾಥಾ ಸ್ತಬ್ಧಚಿತ್ರ ವಾಹನವು ಈವರೆಗೂ ಜಿಲ್ಲೆಯ 130 ಗ್ರಾಮ ಪಂಚಾಯತಿ ಹಾಗೂ 4 ನಗರ ಸ್ಥಳೀಯ ಸಂಸ್ಥೆಗಳಲ್ಲಿ   ಸಂವಿಧಾನದ ಬಗ್ಗೆ ಅರಿವು ಮೂಡಿಸಿದೆ. ಈಗಾಗಲೇ ತುಮಕೂರು ತಾಲ್ಲೂಕು, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ   ಅರಿವು ಮೂಡಿಸಿ ಕುಣಿಗಲ್ ಹಾಗೂ ಶಿರಾ ತಾಲ್ಲೂಕಿನಲ್ಲಿ ಅರಿವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಹಬಾಳ್ವೆಯ ಸಂದೇಶ ಹೊತ್ತು ತರುವ ಈ ಜಾಥಾ ಕಾರ್ಯಕ್ರಮದಲ್ಲಿ ಪ್ರತಿ ಭಾರತೀಯರು ಪಾಲ್ಗೊಂಡು ಯಶಸ್ವಿಗೊಳಿಸಬೇಕು.  ನಮ್ಮ ಸಂವಿಧಾನವು ನಮಗೆ ನೀಡಿರುವ ಶಕ್ತಿ ಹಾಗೂ ಜವಾಬ್ದಾರಿಗಳನ್ನು ಅರಿಯಬೇಕು. ಸಂವಿಧಾನಕ್ಕೆ ಗೌರವ ಕೊಟ್ಟಷ್ಟು ದೇಶ ಸದೃಢವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಈ ವಿನೂತನ ಪ್ರಯತ್ನದ ಬಗ್ಗೆ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ್, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ. ಮಹದೇವಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂದು ನಡೆಸಿರುವ ಪ್ರಗತಿ ಸಭೆಯಲ್ಲಿ  ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಗಳನ್ನು ಸೃಜನಶೀಲವಾಗಿ ಏರ್ಪಡಿಸುವಲ್ಲಿ ತುಮಕೂರು ಜಿಲ್ಲೆಯನ್ನು ಮಾದರಿಯಾಗಿಟ್ಟುಕೊಳ್ಳಬೇಕೆಂದು ಇತರೆ ಜಿಲ್ಲೆಗಳಿಗೆ ಸೂಚನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ನಮ್ಮ ಸಂವಿಧಾನಕ್ಕೆ ಶಾಲಾ ಮಕ್ಕಳಿಂದ ಗೌರವ

ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ   “ನಮ್ಮ ಸಂವಿಧಾನ” ಎಂಬ ಕನ್ನಡ ಪದದ ವಿಶೇಷ ಆಕೃತಿಗೆ ಶಾಲಾ ಮಕ್ಕಳು ಗೌರವ ಸಮರ್ಪಿಸಿದರು. ನಗರದ ಸಿದ್ಧಗಂಗಾ ಪ್ರೌಢಶಾಲೆ, ಸಿದ್ಧಗಂಗಾ ಎಲಿಮೆಂಟರಿ ಶಾಲೆ, ಚೇತನ ವಿದ್ಯಾಮಂದಿರ, ಸಿಲ್ವರ್ ಜ್ಯೂಬಿಲಿ ಶಾಲೆ, ವಿವೇಕಾನಂದ ಶಾಲೆ, ಕಾರ್ಮೆಲ್ ಶಾಲೆ, ಚೈತನ್ಯ ಟೆಕ್ನೋ, ಸುಮತಿ ಶಾಲೆ, ಸೀತಾ ಪ್ರೌಢಶಾಲೆ, ಬಿ.ಎ.ಗುಡಿಪಾಳ್ಯ ಹಾಗೂ ಹನುಮಂತಪುರದ ಸರ್ಕಾರಿ ಶಾಲೆಗಳ ಸುಮಾರು 2000 ವಿದ್ಯಾರ್ಥಿಗಳು ನಮ್ಮ ಸಂವಿಧಾನ ಆಕೃತಿ ಸುತ್ತಲೂ ಸರಣಿಯಲ್ಲಿ ನಿಂತು ಗೌರವ ಸಲ್ಲಿಸಿ ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ವಿನೂತನ ಪ್ರಯತ್ನಕ್ಕೆ ಸಾಕ್ಷಿಯಾದರು.  ದ್ರೋಣ್ ಕ್ಯಾಮೆರಾದಲ್ಲಿ “ನಮ್ಮ ಸಂವಿಧಾನ” ವಿಶೇಷ ಆಕೃತಿಯನ್ನು ಸೆರೆ ಹಿಡಿಯಲಾಯಿತು.   

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments