ತುಮಕೂರು : ಸಂಬಂಧಿಕರ ಬರ್ತ್ ಡೇ ಪಾರ್ಟಿ ಮುಗಿಸಿ ಮನೆಗೆ ತೆರಳುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ದಾರೂಣ ಘಟನೆ ತುಮಕೂರು (Tumkur accident) ತಾಲೂಕಿನ ಯಲ್ಲಾಪುರ ಬಳಿ ನಡೆದಿದೆ. ಮೃತರನ್ನು ಉಮಾ (50) ಮತ್ತು ವಿನೋದ್ (24) ಎಂದು ಗುರುತಿಸಲಾಗಿದೆ.
ಪಾವಗಡ ಮೂಲದ ಉಮಾ, ಕಳೆದ ಎರಡು ದಿನಗಳ ಹಿಂದೆ ತುಮಕೂರು ತಾಲೂಕಿನ ಅರಕೆರೆಯಲ್ಲಿ ವಾಸಮಾಡುತ್ತಿದ್ದ ತಂಗಿ ಮನೆಗೆ ಬಂದಿದ್ದರು. ನಿನ್ನೆ ಸಂಜೆ ತನ್ನ ತಂಗಿ ಮಗ ವಿನೋದ್ ಜೊತೆ ಯಲ್ಲಾಪುರದಲ್ಲಿ ಸಂಬಂಧಿಕರೊಬ್ಬರ ಬರ್ತ್ ಡೇ ಪಾರ್ಟಿಗೆ ತೆರಳಿದ್ರು. ರಾತ್ರಿ ಬರ್ತ್ ಡೇ ಪಾರ್ಟಿಯಲ್ಲಿ ಊಟ ಮುಗಿಸಿಕೊಂಡು ಮನೆಗೆ ಬೈಕ್ ನಲ್ಲಿ ವಾಪಸ್ ತೆರಳುವಾಗ ಅಪಘಾತ ನಡೆದಿದೆ.
ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತ ದೇಹಗಳನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.