ತುಮಕೂರು | ಕಳೆದ ಮೂರು ನಾಲ್ಕು ದಿನಗಳಿಂದ ತುಮಕೂರು ಜಿಲ್ಲೆಯಾದ್ಯಂತ ತುಂತುರು ಮಳೆಯಾಗುತ್ತಿದ್ದು ಕಲ್ಪತರು ನಾಡು, ಶೇಂಗಾ ಬೀಡು, ಶೈಕ್ಷಣಿಕ ನಗರ ಎಂದು ಕರೆಸಿಕೊಳ್ಳುವ ತುಮಕೂರು ಇದೀಗ ಅಕ್ಷರ ಶಹಃ ಮಲೆನಾಡಿನಂತೆ ಆಗಿದೆ.
ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು ಕೆಲವು ಕಾಲ ಬಿಡುವ ಕೊಡುವ ಮಳೆರಾಯ ಮತ್ತೆ ಹನಿ ಹನಿ ರೂಪದಲ್ಲಿ ಧರೆಗೆ ಇಳಿಯುತ್ತಿದ್ದಾನೆ. ಇನ್ನು ತುಮಕೂರು ನಗರದಾದ್ಯಂತ ತಂಪಾದ ವಾತಾವರಣವಿದ್ದು ಒಂದು ರೀತಿಯಾದಂತಹ ಹಿತವಾದ ಅನುಭವ ನೀಡುತ್ತಿದೆ.
ಇನ್ನೂ ಶಾಲೆಗೆ ತೆರಳುವ ಮಕ್ಕಳು ಸೇರಿದಂತೆ ಸಾರ್ವಜನಿಕರು ಸೋನೆ ಮಳೆಯಲ್ಲಿ ಕೊಡೆ ಹಿಡಿದು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೈಕ್ ಸವಾರರಂತೂ ಅತ್ತ ಜೋರಾಗಿಯೂ ಬಾರದ ಇತ್ತ ನಿಂತು ಕೂಡ ಹೋಗದ ಮಳೆಯ ಈ ಕಣ್ಣ ಮುಚ್ಚಾಲೆ ಆಟಕ್ಕೆ ಗೊಣಗಾಡುತ್ತಾ ಓಡಾಡುತ್ತಿದ್ದಾರೆ.
ತಾಲೂಕುವಾರು ಮಳೆಯ ವಿವರ
ತುಮಕೂರು 5.2 ಮಿ.ಮೀ .
ಗುಬ್ಬಿ 10ಮಿ.ಮೀ.
ಕುಣಿಗಲ್ 5 ಮಿ.ಮೀ.
ತಿಪಟೂರು 4.3 ಮಿ.ಮೀ.
ಚಿಕ್ಕನಾಯಕನಹಳ್ಳಿ 7.3 ಮಿ.ಮೀ.
ತುರುವೆಕೆರೆ 10 ಮಿ.ಮೀ.
ಮಧುಗಿರಿ 3.3 ಮಿ.ಮೀ.
ಶಿರಾ 5.2 ಮಿ.ಮೀ
ಕೊರಟಗೆರೆ 6.1 ಮಿ.ಮೀ
ಪಾವಗಡ 6.2 ಮಿ.ಮೀ
ಜಿಲ್ಲೆಯಾದ್ಯಂತ ತುಂತುರು ಮಳೆ ಯಾಗುತ್ತಿದ್ದು ರೈತರಿಗೆ ಸಂತಸವನ್ನು ನೀಡಿದರೆ. ನಗರ ಪ್ರದೇಶಗಳಲ್ಲಿ ಕೆಲಸಕ್ಕೆ ಓಡಾಡುವ ಜನಸಾಮಾನ್ಯರಿಗೆ ಒಂದಿಷ್ಟು ಕಿರಿಕಿರಿ ಉಂಟಾಗಿದೆ. ಸದ್ಯಕ್ಕೆ ಈ ಮಳೆಯ ವಾತಾವರಣ ಇನ್ನಷ್ಟು ದಿನ ಮುಂದುವರೆಯಲಿದೆ ಎನ್ನುವುದು ಹವಾಮಾನ ಇಲಾಖೆಯ ಮುನ್ಸೂಚನೆ.