ತುಮಕೂರು | ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಡಿಸೆಂಬರ್ 2 ರಂದು ನಡೆದ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಆಶ್ರಯ ಯೋಜನೆಯಡಿ ನಿವೇಶನ ಕಲ್ಪಿಸಬೇಕೆಂದು ಶಿರಾ ನಗರದ ರಾಬಿಯಾ ಕೋಂ ಅಸ್ಲಾಂ ಪಾಷ ಎಂಬ ಮಹಿಳೆಯ ಮನವಿಗೆ ಸ್ಪಂದಿಸಿದ ತುಮಕೂರು (Tumakuru) ಜಿಲ್ಲಾಡಳಿತ ಒಂದೇ ದಿನದಲ್ಲಿ 20*30 ಅಳತೆಯ ನಿವೇಶನವನ್ನು ಹಂಚಿಕೆ ಮಾಡಿ ಠರಾವು ಅಂಗೀಕರಿಸಲಾಗಿದೆ.
ಮಹಿಳೆಯ ಬಡತನವನ್ನು ಮನಗಂಡು ಆಶ್ರಯ ಯೋಜನೆಯಡಿ ರಾಬಿಯಾ ಅವರಿಗೆ ನಿವೇಶನ ನೀಡಲು 2024ರ ಸೆಪ್ಟೆಂಬರ್ 25 ರಂದು ನಡೆದ ಶಿರಾ ಆಶ್ರಯ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ.ಪರಮೇಶ್ವರ ಅವರು ನಗರದಲ್ಲಿ ಇಂದು ತಮ್ಮನ್ನು ಭೇಟಿ ಮಾಡಿದ ರಾಬಿಯಾಗೆ ನಿರ್ಣಯ ಕೈಗೊಂಡ ಆಶ್ರಯ ಸಮಿತಿ ಸಭೆಯ ನಡಾವಳಿ ಪತ್ರವನ್ನು ನೀಡಿದರು.
ಶಿರಾ ನಗರದಲ್ಲಿ ಆಶ್ರಯ ಯೋಜನೆಯಡಿ ರಚಿಸಲಾಗಿರುವ ನಿವೇಶನಗಳ ಪೈಕಿ ಸರ್ವೇ ನಂಬರ್ 100ರಲ್ಲಿ 20*30 ಅಳತೆಯ ಒಂದು ನಿವೇಶನವನ್ನು ರಾಬಿಯಾ ಅವರ ಕುಟುಂಬಕ್ಕೆ ಹಂಚಿಕೆ ಮಾಡಲು ತಿರ್ಮಾನಿಸಲಾಗಿದೆ. ಅರ್ಜಿದಾರರ ಸೂಕ್ತ ದಾಖಲೆಗಳನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಸಲ್ಲಿಸಿ ನಿಯಮಾನುಸಾರ ಹಕ್ಕು ಪತ್ರ ಸೃಜಿಸಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.