ತುಮಕೂರು | ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಇಸ್ಲಾಂಪುರ ಗ್ರಾಮದ ಮುಸ್ಲಿಂ ಕುಟುಂಬಕ್ಕೆ ಸೇರಿದ ಮೂವರು ಶಾಲಾ ಮಕ್ಕಳು ಶುಕ್ರವಾರ ಶಾಲೆ ಮುಗಿಸಿ ಮನೆಗೆ ಬಂದು, ನಂತರ ಗ್ರಾಮದ ಪಕ್ಕದಲ್ಲಿ ಹರಿಯುತ್ತಿದ್ದ ನಾಲೆಯ ಬಳಿ ಆಟವಾಡಲು ಹೋಗಿ ಆಕಸ್ಮಿವಾಗಿ ಜಾರಿ ಬಿದ್ದಿದ್ದಾರೆ.
ಮೂವರು ಮಕ್ಕಳಲ್ಲಿ ಇಬ್ಬರು ಮೃತರಾಗಿದ್ದು, ಒಬ್ಬ ಪ್ರಾಣಪಾಯದಿಂದ ಪಾರಾಗಿದ್ದಾರೆ. ಮೃತ ಮಕ್ಕಳನ್ನು ಮೊಹಮ್ಮದ್ ನಯೀಮ್ (7) ಹಾಗೂ ಮಿಸ್ಬಾಬಾನು(9) ಎಂದು ಗುರುತಿಸಲಾಗಿದೆ, ಪ್ರಾಣಾಪಾಯದಿಂದ ಪಾರಾಗಿರುವ ಮೊಹಮ್ಮದ್ ಬಿಲಾಲ್ (10) ನನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದ್ದು, ಮೊಹಮ್ಮದ್ ಬಿಲಾಲ್ ಹಾಗೂ ಮೊಹಮ್ಮದ್ ನಯೀಮ್ ಒಂದೇ ಕುಟುಂಬದವರಾಗಿದ್ದಾರೆ. ಬಾಲಕಿ ಮಿಸ್ಬಾಬಾನು(9) ನೀರಿನಲ್ಲಿ ಕೊಚ್ಚಿಹೋಗಿ, ಹೇರೂರಿನ ಬಳಿ ಶವವಾಗಿ ದೊರೆತಿರುವುದಾಗಿ ತಿಳಿದುಬಂದಿದೆ.
ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಮಕ್ಕಳನ್ನು ನೋಡಿದ ಸಮೀಪದ ಇಟ್ಟಿಗೆ ಕಾರ್ಖಾನೆಯ ಕೆಲಸಗಾರ ಆಕಾಶ್ ಕಾರ್ತಿಕ್ ಇಬ್ಬರು ಮಕ್ಕಳನ್ನು ನೀರಿನಿಂದ ಹೊರತೆಗೆದಿದ್ದಾನೆ. ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳದಲ್ಲಿ ಹಾಜರಿದ್ದು, ಅಗತ್ಯ ಕ್ರಮ ಕೈಗೊಂಡಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಅಪಾರ ಜನಸ್ತೋಮ ಸೇರಿದೆ.