ತುಮಕೂರು | ಲೂಟಿ ಹೊಡೆದು ತಿಹಾರ್ ಜೈಲಿಗೆ ಹೋಗಿ ಬಂದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನಮಗೆ ನೀತಿ ಪಾಠ ಹೇಳೋದು ಬೇಡ ಎಂದು ತುಮಕೂರು ಗ್ರಾಮಾಂತರದ ಬಿಜೆಪಿ ಶಾಸಕ ಸುರೇಶ್ ಗೌಡ (Suresh Gowda) ಕಿಡಿ ಕಾರಿದ್ದಾರೆ.
ಕುಣಿಗಲ್ ಹಾಗೂ ಮಾಗಡಿ ಭಾಗಗಳಿಗೆ ಶ್ರೀರಂಗ ಏತ ನೀರಾವರಿ ಯೋಜನೆಯ ಮೂಲಕ ಕುಡಿಯುವ ನೀರನ್ನು ತೆಗೆದುಕೊಂಡು ಹೋಗುವ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ತುಮಕೂರಿನಲ್ಲಿ ಕಿಚ್ಚು ಹೆಚ್ಚಾಗಿದ್ದು, ತುಮಕೂರು ಗ್ರಾಮಾಂತರ, ಗುಬ್ಬಿ, ತುರುವೇಕೆರೆ ಭಾಗದಲ್ಲಿ ಇದರಿಂದ ಸಾಕಷ್ಟು ಸಮಸ್ಯೆ ಆಗಲಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸೇರಿದಂತೆ ರೈತರು ಪ್ರತಿಭಟನೆ, ಹೋರಾಟ ಮಾಡಲು ಮುಂದಾಗಿದ್ದಾರೆ.
ಹೇಮವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಹೋರಾಟಗಾರರು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದು, ಇವರ ಈ ಹೇಳಿಕೆಯಿಂದ ತುಮಕೂರು ಜಿಲ್ಲೆಯಲ್ಲಿ ಹೋರಾಟದ ಕಿಚ್ಚು ಮತ್ತಷ್ಟು ಹೆಚ್ಚಾಗಿದೆ.
ಇದೆ ವೇಳೆಯಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಸುರೇಶ್ ಗೌಡ ತುಮಕೂರು ಜಿಲ್ಲೆಗೆ ವೈ ಕೆ ರಾಮಯ್ಯನವರು ಹೋರಾಟ ಮಾಡಿ ಹೇಮಾವತಿ ನೀರು ತಂದಾಗ ಡಿ ಕೆ ಶಿವಕುಮಾರ್ ಹುಟ್ಟೆ ಇರಲಿಲ್ಲ ಎಂದು ತಿರುಗೇಟು ನೀಡುವ ಮೂಲಕ ಹೇಮಾವತಿ ನೀರನ್ನು ಉಳಿಸಿಕೊಳ್ಳಲು ನಮ್ಮ ಹೋರಾಟ ಹೀಗೆ ಮುಂದುವರೆಯುತ್ತದೆ ಎಂದು ಟಾಂಗ್ ನೀಡಿದ್ದಾರೆ.