ತುಮಕೂರು | ಕೆಲ ದಿನಗಳ ಹಿಂದೆ ಬೆಂಗಳೂರಿನ ಗಿರಿ ನಗರದ ವೀರಭದ್ರನಗರ ವೃತ್ತದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಜಿಯವರ ಪ್ರತಿಮೆಯನ್ನು (Statue of Sri Shivakumar Mahaswamiji) ವಿಕೃತ ಮನಸ್ಸಿನ ಕಿಡಿಗೇಡಿಯೊಬ್ಬ ದ್ವಂಸ ಮಾಡಿ ವಿರೂಪ ಗೊಳಿಸಿದ್ದನು. ಈ ಕೃತ್ಯವನ್ನು ಖಂಡಿಸಿ ಅಖಿಲ ಭಾರತ ವೀರಶೈವ ಮಹಾಸಭಾ ಬೆಂಗಳೂರು ನಗರ ಘಟಕದ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಕೂಡ ಮಾಡಲಾಗಿತ್ತು.
ಈ ಘಟನೆಗೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿಯವರು, ಮಠದ ಭಕ್ತರು, ಶ್ರೀಗಳ ಭಕ್ತರು ಈ ಹಿಂದೆ ಅಲ್ಲಿ ಪ್ರತಿಮೆಯನ್ನು ನಿರ್ಮಾಣ ಮಾಡಿ ಶ್ರದ್ಧಾ ಪೂರ್ವಕವಾಗಿ ನಡೆದುಕೊಂಡು ಬರುತ್ತಿದ್ದರು. ಆದರೆ ಇಂದು ಆಗಿರುವ ಈ ಘಟನೆ ನಿಜಕ್ಕೂ ಕೂಡ ಬೇಸರ ತರಿಸಿದೆ ಎಂದರು.
ಈ ರೀತಿಯಾಗಿ ಹಾನಿ ಮಾಡಿದವರು ಯಾರು ಎಂದು ಗೊತ್ತಿಲ್ಲ. ಯಾವ ಉದ್ದೇಶಕ್ಕೆ ಮಾಡಿದ್ದಾರೆ ಎಂದು ಗೊತ್ತಿಲ್ಲ. ಯಾವ ಸಮಾಜದವರು ಎಂದು ಕೂಡ ಗೊತ್ತಿಲ್ಲ. ಸರ್ವಧರ್ಮಿಯರನ್ನು ಸಮಾನವಾಗಿ ಕಾಣುವುದು ಶ್ರೀಮಠ ಮತ್ತು ಲಿಂಗೈಕ್ಯ ಶಿವಕುಮಾರ ಮಹಾಸ್ವಾಮಿಜಿಯವರು. ಇಂತಹ ಪುಣ್ಯಾತ್ಮರ ಪ್ರತಿಮೆಗೆ ಹಾನಿ ಮಾಡಿರುವುದು ಬೇಸರವನ್ನು ತಂದಿದೆ ಎಂದು ತಿಳಿಸಿದರು.
ಸ್ಥಳೀಯರು ಸೇರಿದಂತೆ ಮುಂದಿನ ದಿನಗಳಲ್ಲಿ ಇಂತಹ ಅಚಾತುರ್ಯ ನಡೆಯದಂತೆ ಮುಂಜಾಗ್ರತೆಯನ್ನು ವಹಿಸಬೇಕು. ಇಂತಹ ವಿಕೃತ ಮನಸ್ಸಿನವರನ್ನು ಪರಿವರ್ತಿಸಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.