ಹಾಸನ | ಡಿ. ಕೆ. ಶಿವಕುಮಾರ್ (D. K. Shivakumar) ಅವರನ್ನು ಕಳೆದ ಜನವರಿ ತಿಂಗಳಿನಲ್ಲಿ ಅನುದಾನದ ವಿಷಯವಾಗಿ ಭೇಟಿ ಮಾಡಿದ್ದೆ. ಒಂದೂವರೆ ತಿಂಗಳಿನಿಂದ ಬೆಂಗಳೂರಿಗೇ (Bangalore) ಹೋಗಿಲ್ಲ ಹೀಗಿರುವಾಗ ಹೊಸದಾಗಿ ಭೇಟಿ ಮಾಡಲು ಹೇಗೆ ಸಾಧ್ಯ..? ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ (Sooraj Revanna) ಹೇಳಿದ್ದಾರೆ.
ಹೊಳೆನರಸೀಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಮ್ಮ ಕ್ಷೇತ್ರ, ನಮ್ಮ ಜಿಲ್ಲೆಯ ಪ್ರತಿನಿಧಿಯಾಗಿ ಅವರನ್ನು ಭೇಟಿ ಮಾಡಿದ್ದು ನಿಜ. ಅದು ಮಾಧ್ಯಮಗಳಲ್ಲೂ ಪ್ರಕಟವಾಗಿತ್ತು. ಒಂದೂವರೆ ತಿಂಗಳಿನಿಂದ ಎಲೆಕ್ಷನ್‌ನಲ್ಲಿ ಇಲ್ಲೇ ಬ್ಯುಸಿ ಇದ್ದೀನಿ. ಬೆಂಗಳೂರಿಗೆ ಇವತ್ತಿನವರೆಗೂ ಒಂದು ದಿನಾನೂ ಹೋಗಿಲ್ಲ, ಡಿ.ಕೆ.ಶಿವಕುಮಾರ್ ಆಗಲಿ ಬೇರೆ ಯಾವುದೇ ರಾಜಕಾರಣಿ ಆಗಲಿ ಭೇಟಿ ಮಾಡುವ ಸಂದರ್ಭ ಎಲ್ಲಿ ಬರುತ್ತೆ..? ಎಂದು ಪ್ರಶ್ನಿಸಿದರು.
ನಮ್ಮ ಕ್ಷೇತ್ರ, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸೌಹಾರ್ದವಾಗಿ ಭೇಟಿ ಮಾಡಿದ್ದು ನಿಜ. ಅವಾಗಲೂ ಮಾಧ್ಯಮಗಳು ರೇವಣ್ಣ ಕುಟುಂಬ ಕಾಂಗ್ರೆಸ್ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ವದಂತಿ ಸೃಷ್ಟಿ ಮಾಡಿದ್ದವು. ಈ ಊಹಾಪೋಹಗಳನ್ನೆಲ್ಲಾ ಬಿಟ್ಟುಬಿಡಿ. ದಯವಿಟ್ಟು ರಾಜ್ಯದ ಜನತೆಗೆ ಒಂದು ಸ್ಪಷ್ಟನೆ ಇರಲಿ. ಯಾವುದೇ ತರಹದ ವಿಷಯಗಳ ಬಗ್ಗೆ ದುರಾಲೋಚನೆ ಇರಬಾರದು ಎಂದು ಮಾಧ್ಯಮಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲ ಇದ್ಯಾ..?
ನಮ್ಮ ಯಾವ ಕಾರ್ಯಕರ್ತರೂ ಗೊಂದಲದಲ್ಲಿ ಇಲ್ಲ. ನಿನ್ನೆಯೂ ನಾವೆಲ್ಲ ಸಭೆ ಮಾಡಿದ್ದೇವೆ. ಚುನಾವಣೆ ಯಾವ ರೀತಿ ಆಗಿದೆ ಎಂದು ಎಲ್ಲಾ ಕಾರ್ಯಕರ್ತರ ಜತೆ ಸಭೆ ಮಾಡಿದ್ದೇವೆ. ಎಲ್ಲರೂ ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೂರಕ್ಕೆ ನೂರು ಪ್ರಜ್ವಲ್ ರೇವಣ್ಣ ಅವರು ಗೆಲ್ತಾರೆ ಎಂದರು.
ಯಾರು ಏನು ಬೇಕಾದರೂ ಆರೋಪ ಮಾಡಿಕೊಳ್ಳಲಿ. ಎಸ್‌ಐಟಿ ರಚನೆಯಾಗಿದೆ, ಅದು ಯಾವ ಉದ್ದೇಶಕ್ಕೋಸ್ಕರ ರಚನೆಯಾಗಿದೆ. ಅದರಲ್ಲಿ ಏನು ಸಾಬೀತಾಗುತ್ತೆ ಕಾದುನೋಡೋಣ ಬನ್ನಿ ಎಂದರು.
ರೇವಣ್ಣ ಅವರ ಮೇಲೆ ಸಾವಿರ ಕೇಸ್ ಮಾಡಲಿ..!
ಪ್ರಜ್ವಲ್ ಬಗ್ಗೆ ನನಗೆ ಮಾಹಿತಿ ಇಲ್ಲ. ಇಲ್ಲಿ ನಾವು ಏನು ಕಾರ್ಯಕ್ರಮ ಅಟೆಂಡ್ ಆಗಬೇಕೋ ಆ ಕೆಲಸ ನಾನು ಮಾಡ್ತಾ ಇದ್ದೀನಿ. ರೇವಣ್ಣ ಅವರ ಮೇಲೆ ಸಾವಿರ ಕೇಸ್ ಮಾಡಲಿ. ರೇವಣ್ಣ ಅವರು ಏನೆಂದು ನಮ್ಮ ಜಿಲ್ಲೆಯ ಜನರಿಗೆ ಗೊತ್ತು, ನಮ್ಮ ತಾಲ್ಲೂಕಿನ ಜನರಿಗೆ ಗೊತ್ತು. ಅಂತಹ ವಿಚಾರಕ್ಕೆ ನಾನು ಪ್ರತಿಕ್ರಿಯೆ ಕೊಡೋದಿಲ್ಲ.
ರಾಜಕೀಯ ದುರುದ್ದೇಶದಿಂದ ಯಾರು ಏನು ಬೇಕಿದ್ದರೂ ಮಾಡ್ತಾರೆ. ಹಾಸನ ಜಿಲ್ಲೆಯ ರಾಜಕಾರಣದಲ್ಲಿ ರೇವಣ್ಣ ಅವರಿಗೆ ಪ್ರತಿರೋಧ ಅಥವಾ ಪ್ರತಿಸ್ಪರ್ಧಿ ಇಲ್ಲ. ಅವರ ರೀತಿ ರಾಜಕಾರಣ ಮಾಡಿದವರೂ ಇಲ್ಲ. ಅವರನ್ನು ಸಿಲುಕಿಸಬೇಕು, ವೀಕ್ ಮಾಡಬೇಕು ಎಂದು ಷಡ್ಯಂತ್ರ ಮಾಡ್ತಾ ಇದ್ದಾರೆ ಎಂದು ಗುಡುಗಿದರು.
[…] […]