ಬೆಂಗಳೂರು | ಮಾಜಿ ಮುಖ್ಯಮಂತ್ರಿ, ವಿದೇಶಾಂಗ ಸಚಿವ ಹಾಗೂ ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಎಸ್.ಎಂ.ಕೃಷ್ಣ ನಿಧನರಾಗಿದ್ದಾರೆ (SM Krishna passes away). ಇಂದು ಬೆಳಗಿನ ಜಾವ 2:45ಕ್ಕೆ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದು ಅವರ ಪಾರ್ಥಿವ ಶರೀರವನ್ನು ತಮ್ಮ ಸ್ವಕ್ಷೇತ್ರ ಮದ್ದೂರಿಗೆ ಕೊಂಡೊಯ್ಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಎಸ್.ಎಂ.ಕೃಷ್ಣ ಅವರು 1932ರಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಅವರು 1999 ರಿಂದ 2004 ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ. 2004 ರಿಂದ 2008 ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದರು. 22 ಮೇ 2009 ರಂದು, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಕೃಷ್ಣ ಅವರನ್ನು ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿಕೊಂಡರು ಮತ್ತು 23 ಮೇ 2009 ರಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜವಾಬ್ದಾರಿಯನ್ನು ಹಸ್ತಾಂತರಿಸಿದ್ದರು. 2017ರ ಮಾರ್ಚ್‌ನಲ್ಲಿ ಎಸ್‌ಎಂ ಕೃಷ್ಣ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. 2023ರಲ್ಲಿ ಸರ್ಕಾರ ಎಸ್ ಎಂ ಕೃಷ್ಣ ಅವರಿಗೆ ಪದ್ಮವಿಭೂಷಣ ನೀಡಿ ಗೌರವಿಸಿತ್ತು.
ಎಸ್ ಎಂ ಕೃಷ್ಣರವರ ರಾಜಕೀಯ ಆರಂಭ
ಎಸ್.ಎಂ.ಕೃಷ್ಣ ಅವರ ತಂದೆಯ ಹೆಸರು ಎಸ್.ಸಿ.ಮಲ್ಲಯ್ಯ. ಕೃಷ್ಣ ಅವರು ತಮ್ಮ ಪದವಿಯನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ನಂತರ ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ಹೋದರು. ಅಲ್ಲಿಂದ ಪದವಿ ಪಡೆದ ನಂತರ ಅವರು ಅಂತರರಾಷ್ಟ್ರೀಯ ಕಾನೂನು ಉಪನ್ಯಾಸ ಪ್ರಾರಂಭಿಸಿದರು. ಸಕ್ರಿಯ ರಾಜಕಾರಣದಲ್ಲಿ ಅವರ ಆಸಕ್ತಿ ಅಮೆರಿಕದಲ್ಲಿ ಹುಟ್ಟಿಕೊಂಡಿತು. ಅಲ್ಲಿ ಅವರು ಜಾನ್ ಎಫ್ ಕೆನಡಿಯವರ ಅಧ್ಯಕ್ಷೀಯ ಚುನಾವಣೆಗಾಗಿ ಪ್ರಚಾರ ಮಾಡಿದರು. ಕರ್ನಾಟಕಕ್ಕೆ ಹಿಂದಿರುಗಿದ ಕೂಡಲೇ ಅವರು 1962 ರಲ್ಲಿ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು. ಅವರು ಏಪ್ರಿಲ್ 29, 1964 ರಂದು ಪ್ರೇಮಾ ಅವರನ್ನು ವಿವಾಹವಾದರು.
ಎಸ್ ಎಂ ಕೃಷ್ಣ ರಾಜಕೀಯ ವೃತ್ತಿ
1960ರ ಸುಮಾರಿಗೆ ಎಸ್ ಎಂ ಕೃಷ್ಣ ರಾಜಕೀಯ ಇನ್ನಿಂಗ್ಸ್ ಆರಂಭಿಸಿದ್ದರು. 1962 ರಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಗೆಲುವು ಸಾಧಿಸಿದರು. ಇದಾದ ನಂತರ ಅವರು ಪ್ರಜಾ ಸೋಷಿಯಲಿಸ್ಟ್ ಪಕ್ಷವನ್ನು ಸೇರಿದರು ಮತ್ತು 1968 ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆದ್ದರು. ನಂತರ ಎಸ್‌ಎಂ ಕೃಷ್ಣ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. 1971 ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮರು ಚುನಾವಣೆಯಲ್ಲಿ ಗೆದ್ದರು.
1985ರಲ್ಲಿ ಎಸ್.ಎಂ.ಕೃಷ್ಣ ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದರು. ಅವರು 1999 ರಿಂದ 2004 ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಡಿಸೆಂಬರ್ 2004 ರಿಂದ ಮಾರ್ಚ್ 2008 ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದರು. ಎಸ್ ಎಂ ಕೃಷ್ಣ ಅವರು ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. 2023ರ ಜನವರಿಯಲ್ಲಿ ಎಸ್ ಎಂ ಕೃಷ್ಣ ಅವರು ಇನ್ನು ಮುಂದೆ ಸಕ್ರಿಯ ರಾಜಕಾರಣದಲ್ಲಿ ಇರುವುದಿಲ್ಲ ಎಂದು ಘೋಷಣೆ ಮಾಡಿದ್ದರು.
ಎಸ್ ಎಂ ಕೃಷ್ಣ ಮಂಡ್ಯ ಟು ಇಂಡಿಯಾ
ಕರ್ನಾಟಕದ ಮಂಡ್ಯದಿಂದ ಹಲವಾರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಅವರು ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿಯವರ ಆಡಳಿತದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದರು. 1983-84 ರ ನಡುವೆ ಇಂದಿರಾ ಗಾಂಧಿ ಮತ್ತು 1984-85 ರ ನಡುವೆ ರಾಜೀವ್ ಗಾಂಧಿಯವರ ಅವಧಿಯಲ್ಲಿ ಕೈಗಾರಿಕೆ ಮತ್ತು ಹಣಕಾಸು ರಾಜ್ಯ ಸಚಿವರಾದರು.