ಬೆಂಗಳೂರು | ಕರ್ನಾಟಕ ರಾಜ್ಯದ 24ನೇ ಮುಖ್ಯಮಂತ್ರಿ ಯಾಗಿ ಎರಡನೆಯ ಬಾರಿಗೆ ಅಹಿಂದ ನಾಯಕ, ಕಾಂಗ್ರೆಸ್ ಪ್ರಭಲ ಮುಖಂಡ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಿದರು.
ಶನಿವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಲಕ್ಷಾಂತರ ಕಾರ್ಯಕರ್ತರು, ಅಭಿಮಾನಿಗಳು, ದೇಶದ ಹಲವಾರು ನಾಯಕರು, ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಮತ್ತು ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್ ಸಮ್ಮುಖದಲ್ಲಿ ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ ಸಿದ್ದರಾಮಯ್ಯನವರಿಗೆ ಪ್ರಮಾಣವಚನ ಬೋಧಿಸಿದರು.
2013 ರಿಂದ 2018ರ ಅವಧಿಯಲ್ಲಿ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಸಿದ್ದರಾಮಯ್ಯ, ತಮ್ಮ ಅನೇಕ ಭಾಗ್ಯಗಳ ಮೂಲಕ ರಾಜ್ಯದ ಮನೆ ಮಾತಾಗಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿ ಬಾರಿ ಬಹುಮತದ ಅಂತರದಿಂದ ಜಯಗಳಿಸಿದರು.
ಕಾಂಗ್ರೆಸ್ ಪಕ್ಷ 135 ಬಹುಮತಗಳನ್ನು ಪಡೆದಿದ್ದು, ಯಾರು ಮುಖ್ಯಮಂತ್ರಿ ಆಗಬೇಕು ಎನ್ನುವಂತಹ ವಿಚಾರಕ್ಕೆ ಬಂದಾಗ ಸಿದ್ದರಾಮಯ್ಯನವರ ಹೆಸರು ಮೊದಲ ಬಾರಿಗೆ ಕೇಳಿ ಬಂದಿತ್ತು. ಡಿ ಕೆ ಶಿವಕುಮಾರ್ ಅವರಿಗೆ ಎದುರಾಗಿ ನಿಂತರೂ ಕೂಡ ಕೊನೆಗೆ ಪಕ್ಷದ ಹೈಕಮಾಂಡ್ ಇವರಿಗೆ ಅವಕಾಶ ನೀಡಿತ್ತು.
ಎಲ್ಲವೂ ಕೂಡ ಸುಖಾಂತ್ಯ ಕಂಡು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಒಮ್ಮತದಿಂದ ಸರ್ಕಾರ ರಚನೆಗೆ ಮುಂದಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣವಚನ ಸ್ವೀಕರಿಸಿ ನಂತರ ಸಹಿ ಮಾಡಿ ವೇದಿಕೆ ಮೇಲಿದ್ದ ಹಿರಿಯ ನಾಯಕರಿಗೆ ಹಸ್ತಲಾಘವ ನೀಡಿದರು. ಕೊನೆಗೆ ರಾಜ್ಯಪಾಲ ತಾವರ್ಚಂದ್ ಗೆಹ್ಲೋಟ್ ಅವರಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು. ಈ ಎಲ್ಲಾ ದೃಶ್ಯಗಳನ್ನು ನೋಡಿದ ಸಿದ್ದರಾಮಯ್ಯ ಮುಖದಲ್ಲಿ ಮಂದಹಾಸ ಮನೆ ಮಾಡಿತ್ತು.