ತುಮಕೂರು | ಫೇಸ್ ಬುಕ್ ನಲ್ಲಿ ಪರಿಚಯ ಮಾಡಿಕೊಂಡ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಜಿಲ್ಲಾ ಸತ್ರ ನ್ಯಾಯಾಲಯವು 25,000 ರೂ ದಂಡ ಮತ್ತು 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ಆದೇಶ ಹೊರಡಿಸಿದೆ.
ಪ್ರಕರಣದ ವಿವರ
ರವಿ ಎಂಬ ಆರೋಪಿಯು ಫೇಸ್ ಬುಕ್ ನಲ್ಲಿ ಬಾಲಕಿಯನ್ನು ಪರಿಚಯ ಮಾಡಿಕೊಂಡು ಪುಸಲಾಯಿಸಿ ಸೆಪ್ಟೆಂಬರ್ 13 2021 ರಂದು ಮೈಸೂರಿನ ಎಚ್ ಡಿ ಕೋಟೆ ಟೌನ್ ನಲ್ಲಿರುವ ವಿಶ್ವನಾಥ ಕಾಲೋನಿಯಲ್ಲಿ ಬಾಡಿಗೆ ಮನೆಯನ್ನು ವಾಸಕ್ಕಾಗಿ ಪಡೆದು, ಬಾಲಕಿಯನ್ನು ಅಲ್ಲಿ ಇರಿಸಿ ಸೆಪ್ಟೆಂಬರ್ 16 2021 ರಂದು ನೊಂದ ಬಾಲಕಿಯ ಮೇಲೆ ಆಕೆಯ ಇಚ್ಚೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದಾನೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ದೋಷಾರೋಪಣಾ ಪಟ್ಟಿಯನ್ನು ಅಧಿಕ ಸತ್ರ ನ್ಯಾಯಾಲಯ ಎಫ್ ಟಿ ಎಸ್ ಸಿ ಪೋಕ್ಸೊ ನ್ಯಾಯಾಲಯಕ್ಕೆ ಸಲ್ಲಿಸಿದ್ದು. ಶಿರಾ ಪೊಲೀಸ್ ಠಾಣೆಯ ತನಿಖಾಧಿಕಾರಿ ಹನುಮಂತಪ್ಪ ಸದರಿ ಪ್ರಕರಣದ ತನಿಖೆಯನ್ನು ನಡೆಸಿದ್ದರು.
ಪ್ರಕರಣದ ವಿಚಾರಣೆಯು ಜಿಲ್ಲಾ ಸತ್ರ ನ್ಯಾಯಾಲಯದ ಎಫ್ ಟಿ ಎಸ್ ಸಿ ಪೋಕ್ಸೋ ನ್ಯಾಯದಲ್ಲಿ ನಡೆದಿದ್ದು ಅಭಿಯೋಜನೆಯ ಪರ ವಿಚಾರಣೆ ಮಾಡಲಾದ ಸಾಕ್ಷಗಳಿಂದ ಆರೋಪಿ ರವಿ ವಿರುದ್ಧ ಆರೋಪಗಳು ಸಾಬೀತಾಗಿದ್ದು, ಆರೋಪಿ ರವಿಗೆ ಕಲಂ 4 ಅಡಿಯಲ್ಲಿ ನ್ಯಾಯಾಧೀಶರು 10 ವರ್ಷಗಳ ಕಾಲ ಶಿಕ್ಷೆ 25,000 ರೂ ದಂಡ ವಿಧಿಸಿದ್ದು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ 4 ಲಕ್ಷ ರೂಗಳ ಪರಿಹಾರವನ್ನು ನೀಡಬೇಕೆಂದು ತೀರ್ಪು ನೀಡಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ಆಶಾ ಕೆ ಎಸ್ ವಾದ ಮಂಡಿಸಿದ್ದರು.