ಬೆಂಗಳೂರು | ದಿವಂಗತ ಎಸ್. ಆರ್. ಬೊಮ್ಮಾಯಿಯವರು ಕರ್ನಾಟಕವನ್ನು ಪರ್ಯಾಯ ರಾಜಕಾರಣದ ಪ್ರಯೋಗ ಶಾಲೆಯನ್ನಾಗಿ ಮಾಡಿ ಯಶಸ್ವಿಯಾದರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಇಂದು ಶ್ರೀಮತಿ ಗಂಗಮ್ಮಾ ಸೋಮಪ್ಪ ಬೊಮ್ಮಾಯಿ ಎಜುಕೇಶನಲ್ ಮತ್ತು ವೆಲ್ ಪೇರ್ ಫೌಂಡೇಶನ್ ವತಿಯಿಂದ ಗಾಂಧಿಭವನದಲ್ಲಿ ಏರ್ಪಡಿಸಿದ್ದ ಹಿರಿಯ ಮುತ್ಸದ್ದಿ ದಿ. ಎಸ್.ಆರ್. ಬೊಮ್ಮಾಯಿಯವರ ಜನ್ಮ ಶತಮಾನೋತ್ಸವ ಆಚರಣೆ, ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಸ್ ಆರ್ ಬೊಮ್ಮಾಯಿಯವರು ವಿದ್ಯಾರ್ಥಿಯಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಏಕೀಕರಣ, ಚಲೆ ಜಾವ್ ಚಳುವಳಿ, ಗೇಣಿದಾರರ ಪರ ಹೋರಾಟಮಾಡಿದ್ದರು.
ಜನರ ಅಧಿಕಾರವನ್ನು ಜನರಿಗೆ ವಹಿಸುವ ತೀರ್ಮಾನ ಐತಿಹಾಸಿಕವಾಗಿದೆ. ಕಡಿಮೆ ಅವಧಿ ಅಧಿಕಾರ ನಡೆಸಿದರೂ ಅವರು ತೆಗೆದುಕೊಂಡ ತೀರ್ಮಾಣ ಐತಿಹಾಸಿಕವಾಗಿವೆ. ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೂ ಅವರ ತಂದೆಯ ರೀತಿ ಅಧಿಕಾರ ನಡೆಸಿ, ನೀರಾವರಿ ಸಚಿವರಾಗಿ ರಾಜ್ಯದ ಹಿತಕ್ಕೆ ಧಕ್ಕೆ ಬಾರದಂತೆ ನಡೆದು ಕೊಂಡಿದ್ದಾರೆ. ಜನ ನಾಯಕರಾಗಿ ಬೊಮ್ಮಾಯಿಯವರು ತೆಗೆದುಕೊಂಡ ತೀರ್ಮಾನವನ್ನು ರಾಜ್ಯದ ಜನತೆ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಎಸ್. ಆರ್. ಬೊಮ್ಮಾಯಿ ಅವರ ಕುರಿತ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಎಸ್. ಆರ್. ಬೊಮ್ಮಾಯಿಯವರು ರಾಜಕಾರಣ ಮಾಡುವ ಕಾಲಘಟ್ಟ ಹಿಂತಿರುಗಿ ನೋಡಿದಾಗ ಅವರು ಮಾಡಿದ ಹೋರಾಟ ಅವರ ಪರವಾಗಿ ಆಗಿದ್ದು ಒಂದು ವಿಸ್ಮಯ ಎಂದರು.
ಅಲ್ಲಿಯವರೆಗೂ ರಾಜ್ಯಪಾಲರು ಎಲ್ಲ ವಿಧವಾದ ಆಟವಾಡುತ್ತಿದ್ದರು. ನಾನು ಅನೇಕ ಉದಾಹರಣೆಗಳನ್ನು ಪ್ರತ್ಯಕ್ಷವಾಗಿ ನೋಡಿದ್ದೇನೆ. ಬೂಟಾ ಸಿಂಗ್ ಅವರು ಶಾಸಕರನ್ನು ರಾಜಭವನದಲ್ಲಿ ಕರೆದುಕೊಂಡು ಮಲಗಿದ ಉದಾಹರಣೆ ನೋಡಿದ್ದೇನೆ. ಆದರೂ ಬೊಮ್ಮಾಯಿಯವರು ದೃತಿಗೆಡದೇ ಸುಪ್ರೀಂಕೋರ್ಟ್ ವರೆಗೆ ತೆಗೆದುಕೊಂಡು ಹೊಗಿ ಜಯ ಗಳಿಸಿದ್ದು ಐತಿಹಾಸಿಕ ಕ್ಷಣ. ಕೆಲವು ರಾಜ್ಯಪಾಲರು ಅಧಿಕಾರ ದುರುಪಯೋಗ ಪಡೆಸಿಕೊಂಡಿರುವುದನ್ನು ನೋಡಿದ್ದೇನೆ ಎಂದರು.
ಎಸ್ ಆರ್ ಬೊಮ್ಮಾಯಿಯವರು ಎತ್ತರದ ಧ್ವನಿಯಲ್ಲಿ ಮಾತನಾಡಿದವರಲ್ಲ. ಅವರಂತೆಯೇ ಅವರ ಪುತ್ರ ಬಸವರಾಜ ಬೊಮ್ಮಾಯಿ ಇದ್ದಾರೆ ಎಂದರು.
ಪ್ರಜಾಪ್ರಭುತ್ವ ಎತ್ತ ಕಡೆ ಹೋಗುತ್ತಿದೆ ಎನ್ನುವುದನ್ನು ನೋಡಿದರೆ ಇತ್ತೀಚೆಗೆ ನಡೆದ ಚುನಾವಣೆ ಉದಾಹರಣೆ. ಹಣ ಎಷ್ಟು ಮಹತ್ವದ ಪಾತ್ರ ವಹಿಸಿದೆ ಎನ್ನುವುದನ್ನು ನೋಡಿದರೆ ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ ಎನ್ನುವ ಆತಂಕ ಮೂಡಿದೆ. ಹಣದ ಹೊಳೆ ತಡೆಯದಿದ್ದರೆ ಪ್ರಜಾಪ್ರಭುತ್ವ ಗಂಡಾಂತರಕ್ಕೆ ಹೋಗುತ್ತದೆ ಎನ್ನುವ ಆತಂಕ ಇದೆ. ಇದರ ಬಗ್ಗೆ ನಾಡಿನ ಹಿತ ಚಿಂತಕರು ಗಂಭೀರವಾಗಿ ಆಲೋಚಿಸಬೇಕಿದೆ ಎಂದರು.
ದೇಶದಲ್ಲಿ ಚುನಾವಣಾ ಆಯೊಗ ಇದೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಟಿ.ಎನ್. ಶೇಷನ್ ಅವರು ಇದ್ದಾಗ ಮಾತ್ರ ಚುನಾವಣಾ ಆಯೊಗ ಸೂಕ್ತ ಕಾರ್ಯ ನಿರ್ವಹಿಸಿತ್ತು. ಆ ನಂತರ ಚುನಾವಣಾ ಆಯೋಗ ತನ್ನ ಪಾತ್ರ ನಿರ್ವಹಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.