ಬೆಳಗಾವಿ | ರಾಯಚೂರು ವಿಶ್ವವಿದ್ಯಾಲಯಕ್ಕೆ (Raichur University) ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವ ವಿದ್ಯಾನಿಲಯ ಎಂದು ಮರು ನಾಮಕರಣ ಮಾಡುವ ವಿಧೇಯಕಕ್ಕೆ ಸೋಮವಾರ ವಿಧಾನ ಸಭೆಯಲ್ಲಿ ಅಂಗೀಕಾರ ದೊರೆಯಿತು.
ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ ಸುಧಾಕರ್ ಸೋಮವಾರ 2024ನೇ ಸಾಲಿನ ಕರ್ನಾಟಕ ರಾಜ್ಯ ವಿಶ್ವ ವಿದ್ಯಾನಿಲಯ ತಿದ್ದುಪಡಿ ವಿಧೇಯಕವನ್ನು ಸದನದಲ್ಲಿ ಪರ್ಯಾಲೋಚನೆಗೆ ಪ್ರಸ್ತಾಪಿಸಿದಾಗ, ಸದನ ಧ್ವನಿ ಮತದಿಂದ ವಿಧೇಯಕಕ್ಕೆ ಅಂಗೀಕಾರ ನೀಡಿತು. ಈ ಹಿಂದೆ ರಾಯಚೂರು ವಿಶ್ವ ವಿದ್ಯಾನಿಲಯ ಎಂದು ಕರೆಯಲ್ಪಡುವ ವಿಶ್ವ ವಿದ್ಯಾನಿಲಯ ಇನ್ನೂ ಮುಂದೆ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವ ವಿದ್ಯಾನಿಲಯ ಮರು ನಾಮಕರಣಗೊಂಡಿದೆ.
ಇದೇ ವೇಳೆ ಸಚಿವ ಡಾ. ಎಂ. ಸಿ ಸುಧಾಕರ್ ಚಾಣಕ್ಯ ವಿಶ್ವ ವಿದ್ಯಾಲಯ ತಿದ್ದುಪಡಿ ವಿಧೇಯಕ ಅನುಮೋದನೆಗೆ ಪ್ರಸ್ತಾಪಿಸಿದಾಗ ಯಾವುದೇ ಚರ್ಚೆ ಇಲ್ಲದೆ ಸದನ ಅಂಗೀಕರಿಸಿತು. ಈ ವಿಧೇಯಕದ ಉದ್ದೇಶವೇನೆಂದರೆ ರಾಜ್ಯ ಸರ್ಕಾರ ಮೂಲಕ ಸಂಬಂಧಪಟ್ಟ ಕ್ಷೇತ್ರದಿಂದ ವಿಶೇಷ ತಜ್ಞರನ್ನು ವಿಶ್ವ ವಿದ್ಯಾನಿಲಯ ಆಡಳಿತ ಮಂಡಳಿಗೆ ನಾಮ ನಿರ್ದೇಶನ ಮಾಡಲು ಅವಕಾಶ ಕಲ್ಪಿಸುವುದಾಗಿದೆ.