ಮನರಂಜನೆ | ತೆಲುಗು ಚಿತ್ರರಂಗ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೇ ಕಾತುರದಿಂದ ಕಾಯುತ್ತಿದ್ದ ಸಿನಿಮಾ ಪುಷ್ಪ2 (Pushpa 2). ಅಲ್ಲು ಅರ್ಜುನ್ ಮತ್ತು ಸುಕುಮಾರ್ ಅವರ ಹಿಟ್ ಜೋಡಿ ಮೂಲಕ ಮೂಡಿ ಬಂದಿರುವ ಈ ಸಿನಿಮಾ ಇದೀಗ ಅದ್ದೂರಿಯಾಗಿ ತೆರೆಕಂಡಿದೆ. ಆಂಧ್ರ ತೆಲಂಗಾಣ ಮಾತ್ರವಲ್ಲದೆ ಇಡೀ ಪ್ರಪಂಚದಾದ್ಯಂತ ತೆರೆಕಂಡು ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ.
‘ಪುಷ್ಪ ದಿ ರೈಸ್’ ಸಿನಿಮಾದಲ್ಲಿ ಸಾಮಾನ್ಯ ಕೂಲಿ ಮಾಡುವ ವ್ಯಕ್ತಿಯಾಗಿದ್ದ ಪುಷ್ಪರಾಜ್ ರಕ್ತ ಚಂದನ ಕಳ್ಳ ಸಾಗಾಣಿಕೆ ಮಾಡುವಷ್ಟು ಮಟ್ಟಕ್ಕೆ ಬೆಳೆಯುತ್ತಾನೆ. ಹಣವನ್ನು ಗಳಿಸುತ್ತಾನೆ ಹೆಸರು ಮಾಡುತ್ತಾನೆ. ಇದರ ಮುಂದಿನ ಭಾಗ ‘ಪುಷ್ಪ ದಿ ರೂಲ್’ ಯಾವ ಮಟ್ಟಕ್ಕೆ ಪುಷ್ಪರಾಜ್ ಬೆಳೆಯುತ್ತಾನೆ..? ಹೇಗೆ ಬೆಳೆಯುತ್ತಾನೆ ಎನ್ನುವುದೇ ಕಥೆ.
ಪುಷ್ಪ ಒಂದರಲ್ಲಿ ಇದ್ದ ಆಟಿಟ್ಯೂಡ್ ಇಲ್ಲೂ ಕೂಡ ಹೆಚ್ಚಾಗಿದೆ. ದುಡ್ಡಿಗೆ ಬೆಲೆ ಇಲ್ಲ ಅಧಿಕಾರಕ್ಕೆ ಹೆದರಲ್ಲ. ಮೊದಲ ಭಾಗದಲ್ಲಿ ಓಮಿನಿ ಕಾರು ಖರೀದಿ ಮಾಡಿದ ಪುಷ್ಪರಾಜ್ ಎರಡನೇ ಭಾಗದಲ್ಲಿ ಹೆಲಿಕ್ಯಾಪ್ಟರ್ ಕೊಂಡುಕೊಳ್ಳುವ ಮಟ್ಟಕ್ಕೆ ಬೆಳೆದು ನಿಲ್ಲುತ್ತಾನೆ.
ಸಿಂಡಿಕೇಟ್ ಮುಖ್ಯಸ್ಥನಾಗಿ ಸ್ಮಗ್ಲಿಂಗ್ ಜೊತೆಗೆ ಕುಟುಂಬಕ್ಕೂ ಆದ್ಯತೆಯನ್ನು ನೀಡುತ್ತಾನೆ. ಇನ್ನು ತನ್ನ ಹುಟ್ಟಿಗೆ ಅಂಟಿಕೊಂಡಿರುವ ಕಳಂಕವನ್ನು ಅಳಿಸಲು ಹಾಕಲು ಹೆಣಗಾಡುತ್ತಾನೆ. ದುಡ್ಡಿಗೆ ಬೆಲೆ ಇಲ್ಲದಿದ್ದರೂ ಭಾವನೆಗಳಿಗೆ ಬೆಲೆ ಕೊಡುತ್ತಾನೆ. ಪತ್ನಿ ಶ್ರೀವಲ್ಲಿಯನ್ನು ತುಂಬಾ ಪ್ರೀತಿ ಮಾಡುತ್ತಾನೆ. ಪೊಲೀಸ್ ಅಧಿಕಾರಿ ಶೇಖಾವತ್ ನಡುವಿನ ದ್ವೇಷ ಇಲ್ಲೂ ಕೂಡ ಮುಂದುವರೆಯುತ್ತದೆ. ಇವರಿಬ್ಬರ ನಡುವಿನ ಠಕ್ಕರ್ ಸೀನ್ ಗಳನ್ನು ಥಿಯೇಟರ್ ನಲ್ಲಿ ನೋಡಿ ಎಂಜಾಯ್ ಮಾಡಬೇಕು.
ನಟ ಅಲ್ಲು ಅರ್ಜುನ್ ಡಬಲ್ ಮಾಸಾಗಿ ಆಕ್ಷನ್ ದೃಶ್ಯಗಳಲ್ಲಿ ಅದ್ಭುತವಾಗಿ ಮಿಂಚಿದ್ದಾರೆ. ವೈಲೆಂಟ್ ಫೈಟ್, ಮಾಸ್ ಡೈಲಾಗ್ ಅಭಿಮಾನಿಗಳಿಗೆ ಹಬ್ಬದ ಊಟವನ್ನು ನೀಡುವುದರಲ್ಲಿ ಎರಡು ಮಾತಿಲ್ಲ.
ರಶ್ಮಿಕಾ ಮಂದಣ್ಣ ಅವರಿಗೂ ಕೂಡ ನಿರ್ದೇಶಕ ಸುಕುಮಾರ್ ಇಲ್ಲಿ ಹೆಚ್ಚಿನ ಒತ್ತನ್ನು ನೀಡಿದ್ದಾರೆ. ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಫಹಾದ್ ಫಾಸಿಲ್ ತಮ್ಮ ಪಾತ್ರದಲ್ಲಿ ಭರ್ಜರಿಯಾಗಿ ಮಿಂಚು ಹರಿಸಿದ್ದಾರೆ. ಎಸ್ ಪಿ ಬನ್ವರ್ ಸಿಂಗ್ ಶೇಖಾವತ್ ಮತ್ತು ಪುಷ್ಪರಾಜ್ ನಡುವಿನ ಕಿತ್ತಾಟ ಪ್ರೇಕ್ಷಕರಿಗೆ ಮಜಾ ನೀಡುವುದಂತೂ ಸುಳ್ಳಲ್ಲ.
ಉಳಿದ ತಾರಾ ಗಣದಲ್ಲಿರುವ ಜಗದೀಶ, ಜಗಪತಿ ಬಾಬು, ಸುನಿಲ್, ರಾಹುಲ್ ರಮೇಶ ತಮ್ಮ ಪಾತ್ರವನ್ನು ಜವಾಬ್ದಾರಿಯಿಂದ ನಿಭಾಯಿಸಿದ್ದಾರೆ. ಕಿಸ್ಸಿಕ್ ಹಾಡಿನ ಮೂಲಕ ಪಡ್ಡೆಗಳ ನಿದ್ದೆಗೆಡಿಸುವ ಶೀಲೀಲಾ ಬಂದು ಹೋದರೆ. ಆಗಾಗ್ಗೆ ಕಾಣಿಸಿಕೊಳ್ಳುವ ಡಾಲಿ ಧನಂಜಯ ಪಾತ್ರ ಏನು ಎನ್ನುವುದು ಅರ್ಥವಾಗುವುದಿಲ್ಲ. ಅದಕ್ಕೆ ಹೆಚ್ಚು ಮಹತ್ವ ಕೊಟ್ಟಂತೆ ಕಾಣುತ್ತಿಲ್ಲ. ಅಲ್ಲು ಅರ್ಜುನ್ ಪಾತ್ರಕ್ಕೆ ಹೆಚ್ಚಿನ ಹೈಪ್ ಕೊಡಲು ಹೋಗಿ ಮತ್ತಷ್ಟು ಪಾತ್ರಗಳನ್ನು ಡಮ್ಮಿ ಮಾಡಿದಂತೆ ಕಾಣುತ್ತದೆ.
ಒಟ್ಟಾರೆಯಾಗಿ ಮೂರು ವರ್ಷಗಳ ವಿರಾಮದ ನಂತರ ‘ಪುಷ್ಪಾ ದಿ ರೂಲ್’ ಬಿಡುಗಡೆಯಾಗಿದ್ದು ತೆಲುಗು ನೇಟಿವಿಟಿಗೆ ಮಾಸ್ ಆಡಿಯನ್ಸ್ ಗೆ ಯಾವ ರೀತಿಯಾಗಿ ಸಿನಿಮಾ ನೀಡಬೇಕು ಎಂದು ಅರಿತಿರುವ ಸುಕುಮಾರ್ ಒಂದೊಳ್ಳೆ ಸಿನಿಮಾ ವನ್ನು ಕಟ್ಟಿಕೊಟ್ಟಿದ್ದಾರೆ. ಆದರೆ ಇದರಲ್ಲಿ ಕಥೆಯನ್ನು ಹುಡುಕಲು ಹೋಗುತ್ತೇನೆ, ಲಾಜಿಕ್ ಹುಡುಕಲು ಹೋಗುತ್ತೇನೆ ಎನ್ನುವವರಿಗೆ ಈ ಸಿನಿಮಾ ಅಲ್ಲ.