ಮನರಂಜನೆ | ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಈಗಾಗಲೇ ಲವ್, ಆ್ಯಕ್ಷನ್, ಫ್ಯಾಮಿಲಿ ಸೆಂಟಿಮೆಂಟ್ ಹೀಗೆ ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸುವ ಮೂಲಕ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈಗವರು ಇದೇ ಮೊದಲ ಬಾರಿಗೆ ಬಿಗ್ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಪ್ಯಾನ್ ಇಂಡಿಯಾ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಆ ಚಿತ್ರದ ಹೆಸರು “ಜಾತರ”.
ಲವ್, ಫ್ಯಾಮಿಲಿ ಸೆಂಟಿಮೆಂಟ್ ಕಥಾಹಂದರ ಇರುವ ಈ ಚಿತ್ರದಲ್ಲಿ ಪ್ರಜ್ವಲ್ ಈವರೆಗೆ ನಿರ್ವಹಿಸಿರದ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಹಲವಾರು ಯಶಸ್ವಿ ಚಿತ್ರಗಳನ್ನು ನಿರ್ದೇಶನ ಮಾಡಿರುವ ಉದಯ ನಂದನವನಂ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಹೈದರಾಬಾದ್ ಮೂಲದ ಹೆಸರಾಂತ ವರ್ಧಮಾನ್ ಫಿಲಂಸ್ ಹಾಗೂ ಲೋಟಸ್ ಎಂಟರ್ ಟೈನ್ ಮೆಂಟ್ಸ್ ಮೂಲಕ ಗೋವರ್ಧನ್ ರೆಡ್ಡಿ ಅವರು ಈ ಚಿತ್ರವನ್ನು ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ಸಹಕಾರ ನಗರದ ನಿರ್ಮಾಪಕರ ಕಛೇರಿಯಲ್ಲಿ ನಡೆಯಿತು.
ಆಗಸ್ಟ್ ನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭಿಸಿ, ಬರುವ ಜನವರಿಯಲ್ಲಿ ಸಂಕ್ರಾಂತಿ ವೇಳೆಗೆ ಚಿತ್ರವನ್ನು ರಿಲೀಸ್ ಮಾಡುವ ಯೋಜನೆ ಚಿತ್ರತಂಡಕ್ಕಿದೆ. ಭೀಮ್ಸ್ ಸೆಸಿರೋಲಿಯೋ ಅವರ ಸಂಗೀತ, ಸಾಯಿಶ್ರೀರಾಂ ಅವರ ಛಾಯಾಗ್ರಹಣ, ಬಿ.ವಾಸುದೇವರೆಡ್ಡಿ ಅವರ ಕಥೆ, ಮಾಸ್ತಿ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಅಲ್ಲದೆ ಚಿತ್ರದ ನಾಯಕಿ, ಉಳಿದ ಪಾತ್ರವರ್ಗ ಹಾಗೂ ತಾಂತ್ರಿಕರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.