ತುಮಕೂರು | ಮತದಾನದಿಂದ (Voting) ವಂಚಿತರಾಗಿರುವ ಅಂಚೆ ಇಲಾಖೆಯ ನೌಕರರು (Postal Department Employees) ಮತದಾನಕ್ಕೆ ಅವಕಾಶ ಕಲ್ಪಿಸಿ ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ (Election Officer), ಮತದಾನ ಸಿಬ್ಬಂದಿಯ ನೋಡಲ್ ಅಧಿಕಾರಿಗಳಿಗೆ ಹಾಗೂ ರಾಜ್ಯ ಚುನಾವಣಾ ಆಯುಕ್ತರಿಗೆ ಪತ್ರದ ಮೂಲಕ ಮನವಿ ಮಾಡಿದರು ಸಹ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 24 2024 ರಂದು ಮೈಕ್ರೋ ಅಬ್ಸರ್ವರ್ ತರಬೇತಿಗಾಗಿ ಬೆಳಗ್ಗೆ 10 ಗಂಟೆಗೆ ಹಾಜರಾಗಬೇಕೆಂದು ಮೊಬೈಲ್ ಕರೆ ಮೂಲಕ ಸೂಚನೆ ನೀಡಿದ್ದರು. ತರಬೇತಿಯಲ್ಲಿ ಮೈಕ್ರೋ ಅಬ್ಸರ್ವರ್ ಗಳ ಮತದಾನಕ್ಕೆ ಸಂಬಂಧಿಸಿದಂತೆ ಇಡಿಸಿ ಅಥವಾ ಅಂಚೆ ಮತದಾನದ ಮೂಲಕ ಸೂಕ್ತ ಸಮಯದಲ್ಲಿ ಮತದಾನ ಮಾಡಲು ಅವಕಾಶವನ್ನು ಅವಕಾಶ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು.
ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ನಮ್ಮ ಹಕ್ಕು ಆದರೆ ತುಮಕೂರು ಜಿಲ್ಲಾಡಳಿತ ಹಾಗೂ ಜಿಲ್ಲಾ ಚುನಾವಣಾಧಿಕಾರಿಯ ನಿರ್ಲಕ್ಷ್ಯದಿಂದಾಗಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕೆಲಸಕ್ಕೆ ನೇಮಕವಾಗಿದ್ದ 22 ಕ್ಕೂ ಹೆಚ್ಚು ಜನರು ಮತದಾನದಿಂದ ವಂಚಿತರಾಗಿದ್ದಾರೆ ಎಂದು ಅಂಚೆ ಇಲಾಖೆ ಸಿಬ್ಬಂದಿ ಆರೋಪಿಸಿದ್ದಾರೆ.
ಮತ ಎಣಿಕೆ ಕೊನೆಯ ದಿನದವರೆಗೂ ಅಂದರೆ ಜೂನ್ 3 ರವರೆಗೂ ಇಡಿಸಿ ಹಾಗೂ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದ್ದು, ನಮ್ಮ ಹಕ್ಕನ್ನು ಚಲಾಯಿಸಲು ನಮಗೆ ಅವಕಾಶ ನೀಡಬೇಕೆಂದು ಪತ್ರದ ಮೂಲಕ ಮೇ 9 ರಂದು (TMR/BD/ELECTION – 24/DLGS-09-05-2024 ) ರಂದು ಮನವಿ ಮಾಡಿದ್ದಾರೆ. ಅಧಿಕಾರಿಗಳು ಮತದಾನಕ್ಕೆ ಅವಕಾಶ ನೀಡದಿದ್ದರೆ ನನ್ನ ಹಕ್ಕಿಗಾಗಿ ಕೋರ್ಟ್ ಮೆಟ್ಟಿಲೇರಲು ಹಿಂಜರಿಯುವುದಿಲ್ಲ ಎಂದು ಅಂಚೆ ಇಲಾಖೆ ನೌಕರರು ತಿಳಿಸಿದ್ದಾರೆ.