ತುಮಕೂರು | ಪಾವಗಡ (Pavagada) ಸೋಲಾರ್ ಪಾರ್ಕ್ ನ (Solar Park) ಎರಡನೇ ಹಂತವನ್ನು ಮುಂದಿನ ೨ ವರ್ಷದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಇಂಧನ ಸಚಿವ (Energy Minister) ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ (K.J. George) ಹೇಳಿದರು.
ಜಿಲ್ಲೆಯ ತಿರುಮಣಿ ಸೋಲಾರ್ ಪಾರ್ಕ್ ನ ಕೆಎಸ್‌ಪಿಡಿಸಿಎಲ್ ಕಚೇರಿಯಲ್ಲಿ ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಕರ್ನಾಟಕ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ರ‍್ಯೆತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಾವಗಡ ತಾಲೂಕ್ ಚರಿತ್ರೆ ಸೃಷ್ಟಿಸುವ ಭಾಗವಾಗಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಸೋಲಾರ್ ಪಾರ್ಕ್ ಆಗಲು ಸ್ಥಳೀಯ ರೈತರ ಸಹಕಾರ ಕಾರಣ. ಏಕೆಂದರೆ ಅವರು ಜಮೀನಿನಲ್ಲಿ ಅವಕಾಶ ಕೊಟ್ಟಿರುವುದರಿಂದ ಸೋಲಾರ್ ಪಾರ್ಕ್ ಮಾಡಲಾಗಿದೆ. ಪಾವಗಡ ಹಿಂದುಳಿದ ಪ್ರದೇಶ ಆದರೆ ದೇವರು ಯಥೇಚ್ಚ ಸೂರ್ಯನ ಶಕ್ತಿಯನ್ನು ಈ ಭಾಗಕ್ಕೆ ನೀಡಿದ್ದಾರೆ ಎಂದರು.
ರೈತರಿಗೆ ಅನ್ ಲೈನ್ ಮೂಲಕ ರಿಯಾಯಿತಿ ಶೆ. 80% ದರದಲ್ಲಿ ಸೋಲಾರ್ ಪಂಪ್ ಸೆಟ್ ನೀಡಲಾಗುತ್ತಿದೆ ಹಾಗೂ ಮನೆ ಮನೆಗೂ ಸೌರ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ವಾತಾವರಣಕ್ಕೆ ಪೂರಕವಾದ ಬೆಳೆಗಳನ್ನು ಬೆಳೆಯಲು ರೈತರಿಗೆ ಅವರು ಕರೆ ನೀಡಿದರು. ರಾಜ್ಯದ ವಿದ್ಯುತ್ ಸಮಸ್ಯೆ ನೀಗಿಸಿ, ವಿದ್ಯುತ್ ಸ್ವಾವಲಂಬನೆ ಸಾಧಿಸಲು 2000 ಮೆ.ವ್ಯಾ. ಸಾಮರ್ಥ್ಯದ 2ನೇ ಹಂತದ ನೂತನ ಯೋಜನೆಗೆ ಸ್ಥಳೀಯರ ಸಹಕಾರ ಅಗತ್ಯವಾಗಿದ್ದು, ಸ್ವಯಂ ಪ್ರೇರಣೆಯಿಂದ ಭೂಮಿಯನ್ನು ಭೋಗ್ಯಕ್ಕೆ ಕೊಡಲು ಮುಂದೆ ಬಂದಿರುವ ರೈತರಿಗೆ ಧನ್ಯವಾದ,” ಎಂದರು.
ಹಿಂದಿನ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಂದಿನ ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಕನಸಿನ ಫಲ ಪಾವಗಡ ಸೋಲಾರ್ ಪಾರ್ಕ್ ಆಗ ವಿಶ್ವದಲ್ಲೇ ನಂಬರ್ ಒನ್ ಆಗಿತ್ತು. ಈಗ ನಾವು 4ನೇ ಸ್ಥಾನದಲ್ಲಿದ್ದು, ಮತ್ತೆ ನಂಬರ್ ಒನ್ ಸ್ಥಾನಕ್ಕೇರುವ ಸಂಕಲ್ಪ ಮಾಡಿ ಅದಕ್ಕಾಗಿ ಅಗತ್ಯ ರೂಪುರೇಷೇಗಳ ಸಿದ್ದಪಡಿಸಿ ಯೋಜನೆಗಳ ಜಾರಿಗೊಳಿಸಿದ್ದೆವೆ ” ಎಂದರು.