ಮೈಸೂರು | ಇದೇ ಮೊದಲ ಬಾರಿಗೆ ಅಂತರ್ಜಾತಿ ವಿವಾಹವಾದ (Inter caste marriage) ದಂಪತಿಗಳ ನೊಂದಣಿಗೆ ಸ್ವಯಂ ಸೇವಾ ಸಂಸ್ಥೆಯೊಂದು ಮುಂದಾಗಿದೆ. ಈ ಸಂಬಂಧ ವೆಬ್ ಸೈಟ್ (Web site) ಸಿದ್ಧಪಡಿಸಿದ್ದು, ಇದು ಗುರುವಾರ (ಮೇ 22) ಲೋಕಾರ್ಪಣೆಗೊಳ್ಳಲಿದೆ.
ಮೈಸೂರಿನ (Mysore) ಕುವೆಂಪುನಗರದ ಚಿಕ್ಕಮ್ಮನಿಕೇತನ ಕಲ್ಯಾಣ ಮಂಟಪದಲ್ಲಿ ನಾಳೆ ಸಂಜೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಭಾಗವಹಿಸಲಿದ್ದು, ವೆಬ್ ಸೈಟ್ ಗೆ ಚಾಲನೆ ನೀಡಲಿದ್ದಾರೆ.
ಜನಸ್ಪಂಧನ ಹಾಗೂ ಮಾನವ ಮಂಟಪದ ವತಿಯಿಂದ ಆಯೋಜಿಸಿರುವ ಅಂತರ್ಜಾತಿ ವಿವಾಹಿತರ ಸಭೆ ಹಾಗೂ ಅಂತರ್ಜಾತಿ ದಂಪತಿಗಳ ನೊಂದಣಿಗೆ ಸಮಾರಂಭದಲ್ಲಿ ಚಾಲನೆ ನೀಡಲಾಗುತ್ತದೆ.
ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಮಾಜಿ ಶಾಸಕ ಎಂ. ಕೆ ಸೋಮಶೇಖರ್, ಜಾತಿ, ಜಾತಿ ನಡುವಿನ ಕಲಹ ಜತೆಗೆ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿರುವ ಈ ವೇಳೆ ಅಂತರ್ಜಾತಿ ದಂಪತಿಗಳ ಸಭೆ ನಡೆಸುತ್ತಿರುವುದು ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲಿ ಎಂಬ ಉದ್ದೇಶದಿಂದ ಎಂದರು.
ಬೆಂಗಳೂರು | ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬಹುಮಾನದ ಹೆಸರಿನಲ್ಲಿ ವಾಟ್ಸಾಪ್ ಸಂದೇಶಗಳು (WhatsApp message) ಹರಿದಾಡುತ್ತಿವೆ. ಕೆಲವರು ಸಾಮಾನ್ಯ ಇಮೇಲ್‌ಗಳ ರೂಪದಲ್ಲಿ ಮೋಸದ ಲಿಂಕ್‌ಗಳನ್ನು (Fraudulent link) ಪಡೆಯುತ್ತಿದ್ದಾರೆ. ಅವುಗಳ ಮೇಲೆ ಕ್ಲಿಕ್ಕಿಸಿ ಹಲವರು ಹಣ ಕಳೆದುಕೊಂಡ ಘಟನೆಗಳೂ ಬೆಳಕಿಗೆ ಬಂದಿವೆ, ಈ ಹಿನ್ನೆಲೆಯಲ್ಲಿ ಎಸ್‌ಬಿಐ (SBI) ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.
ಹೌದು,,WhatsApp ನಲ್ಲಿ SBI Rewardz ಲಿಂಕ್ ಅನ್ನು SBI ಹೆಸರಿನಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲಾಗುತ್ತಿದೆ. ಇದು ತಿಳಿದಿರುವ ಸಂಖ್ಯೆಗಳಿಂದ ಬಂದಂತೆ, ಅದನ್ನು ನೋಡಿದವರು ಅದನ್ನು ನಿಜವೆಂದು ನಂಬುತ್ತಿದ್ದಾರೆ. ಇದರ ಪರಿಣಾಮವಾಗಿ, ಅವರು ಸುಲಭವಾಗಿ ಮೋಸ ಹೋಗುತ್ತಿದ್ದಾರೆ. ನಿಮ್ಮ ಎಸ್‌ಬಿಐ ಬಹುಮಾನ ರೂ.7,250 ಅನ್ನು ಸಕ್ರಿಯಗೊಳಿಸಲಾಗಿದೆ. ಇದು ಇಂದು ಮುಕ್ತಾಯಗೊಳ್ಳುತ್ತದೆ. ಹಣವನ್ನು ಪಡೆಯಲು SBI ರಿವಾರ್ಡ್ಸ್ ಅಪ್ಲಿಕೇಶನ್ ಅನ್ನು ಸ್ಥಾಪಿಸಿ. ನಿಮ್ಮ ಖಾತೆಗೆ ಹಣ ಜಮಾ ಮಾಡಲಾಗುತ್ತದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ. SBI Yono ಹೆಸರಿನಲ್ಲಿ ಲಿಂಕ್ ಅನ್ನು ಸಹ ಲಗತ್ತಿಸಲಾಗಿದೆ.
ತನ್ನ ಬ್ಯಾಂಕ್ ರಿವಾರ್ಡ್ ಪಾಯಿಂಟ್‌ಗಳ ಹೆಸರಿನಲ್ಲಿ ನಡೆಯುತ್ತಿರುವ ಸೈಬರ್ ಅಪರಾಧಗಳಿಗೆ ಎಸ್‌ಬಿಐ ಪ್ರತಿಕ್ರಿಯೆ ನೀಡಿದೆ. ರಿವಾರ್ಡ್ ಪಾಯಿಂಟ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ಲಿಂಕ್‌ಗಳನ್ನು ಕಳುಹಿಸುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ. APK ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು ಕೇಳಲಾಗುವುದಿಲ್ಲ. ವಾಟ್ಸ್ ಆಪ್ ಮತ್ತು ಎಸ್ ಎಂಎಸ್ ನಲ್ಲಿರುವ ಯಾವುದೇ ಲಿಂಕ್ ಗಳನ್ನು ಕ್ಲಿಕ್ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಸೈಬರ್ ಅಪರಾಧಗಳ ವಿರುದ್ಧ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ.
ಕಲಬುರಗಿ | ಪ್ರಜ್ವಲ್ ರೇವಣ್ಣ (Prajwal Revanna) ಪೆನ್‌ಡ್ರೈವ್ ಪ್ರಕರಣದಲ್ಲಿ ದಿನಕ್ಕೊಂದು ಬೆಳವಣಿಗೆಗಳಾಗುತ್ತಿವೆ. ಅದರಂತೆ ಭಾನುವಾರ ಶಿವರಾಮೇಗೌಡ (Shivaramegowda) ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಈಗ ಅದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) , ಆಡಿಯೋದಲ್ಲಿ ಮಾತನಾಡಿರೋ ಇಬ್ಬರು ಕೂಡ ಬಿಜೆಪಿ (BJP) ನಾಯಕರು, ನಿರ್ದೇಶಕ, ನಿರ್ಮಾಪಕ, ನಟ ಎಲ್ಲಾ ಅವರೇ ಇದ್ದು, ಈಗ ಅದೆಲ್ಲವನ್ನು ಬಿಟ್ಟು ಪ್ರದರ್ಶಕರ ಮೇಲೆ ತಪ್ಪನ್ನು ಹಾಕುತ್ತಿದ್ದಾರೆ. ಡೈರೆಕ್ಟರ್, ಪ್ರೊಡ್ಯೂಸರ್, ಆಕ್ಟರ್ ಬಗ್ಗೆ ಮಾತನಾಡ್ತಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದ್ದಾರೆ.
ಈಗಾಗಲೇ ಚುನಾವಣೆ ಸಮಯದಲ್ಲಿ ಹರಿಬಿಟ್ಟಿರುವ ಪೆನ್‌ಡ್ರೈವ್ ಪ್ರಕರಣದ ಡೈರೆಕ್ಟರ್, ಪ್ರೊಡ್ಯೂಸರ್, ಆ್ಯಕ್ಟರ್ ಎಲ್ಲಾ ಅವರೇ ಇದ್ದಾರೆ. ಅದು ಬಿಟ್ಟು ಪ್ರದರ್ಶಕರ ಮೇಲೆ ಹಾಕುತ್ತಿದ್ದಾರೆ. ಪಾಪ ಯಾರೋ ಸಿನಿಮಾ ಟೆಂಟ್ ಹಾಕಿರುತ್ತಾರೆ, ಯಾವುದೋ ಪಿಚ್ಚರ್ ರಿಲೀಸ್ ಮಾಡ್ತಾರೆ. ಆದರೆ, ಆ ಡೈರೆಕ್ಟರ್, ಪ್ರೊಡ್ಯೂಸರ್, ಆ್ಯಕ್ಟರ್ ಗಳ ಬಗ್ಗೆ ಮಾತನಾಡ್ತಿಲ್ಲ. ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದತಿಗೆ ಪತ್ರ ಬರೆದರು ಕೂಡ ಇನ್ನು ಕ್ರಮ ಕೈಗೊಂಡಿಲ್ಲ. ಮೋದಿಯವರಿಗೆ ರಷ್ಯಾ-ಉಕ್ರೇನ್ ನಿಲ್ಲಿಸೋಕೆ ಆಗುತ್ತೆ. ಪಾಸ್ ಪೋಟ್೯ ರದ್ದು ಮಾಡೋಕ್ ಆಗ್ತಿಲ್ವಾ ಎಂದು ಕಿಡಿ ಕಾರಿದ್ದಾರೆ.
ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್‌ನಲ್ಲಿ ಶಿವರಾಮೇಗೌಡ ಆಡಿಯೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಆಡಿಯೋದಲ್ಲಿ ಮಾತನಾಡಿರೋ ಇಬ್ಬರು ಕೂಡ ಬಿಜೆಪಿ ನಾಯಕರು. ಅದಕ್ಕೆ ಬಿಜೆಪಿಯವರೇ ಉತ್ತರ ಕೊಡಬೇಕು. ಅವರು ಇಬ್ಬರು ಯಾರದ್ದೋ ಹೆಸರು ಉಲ್ಲೇಖ ಮಾಡಿದ್ರೆ ನಾವಾಕ್ಯೆ ಉತ್ತರ ಕೊಡಬೇಕು. ಈ ಸಂಪೂರ್ಣ ಘಟನೆ ಬಗ್ಗೆ ಶಾ ಅವರಿಗೆ ಮಾಹಿತಿ ಇತ್ತು. ಪ್ರಕರಣ ಮುಖ್ಯ ಆರೋಪಿಯೇ ಇನ್ನು ಸಿಕ್ಕಿಲ್ಲ. ಅವನು ಯಾವಾಗ ಬರುತ್ತಾನೆ..? ಯಾವಾಗ ಪೋಲಿಸರು ಬಂಧಿಸುತ್ತಾರೆ ಗೊತ್ತಿಲ್ಲಾ ಆದರೆ ಆಗಲೇ ಕೇಸ್‌ನ ದಾರಿ ತಪ್ಪಿಸೋ ಕೆಲಸ ಮಾಡ್ತಿದ್ದಾರೆ ಎಂದಿದ್ದಾರೆ.
ಕೃಷಿ ಮಾಹಿತಿ | ತುಮಕೂರು (Tumkur) ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿರುವುದರಿಂದ ರೈತರು ಏಕಕಾಲದಲ್ಲಿ ಮುಂಗಾರು (Monsoon) ಹಂಗಾಮಿನ ಬಿತ್ತನೆಯನ್ನು ಪ್ರಾರಂಭಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ (Sow the seed), ರಸಗೊಬ್ಬರ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ (District Collector Shub Kalyan) ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಂಗಾರು ಹಂಗಾಮಿನ ಸಿದ್ಧತೆ ಕುರಿತು ಕೃಷಿ ಇಲಾಖೆಯ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ರೈತರ ಬೇಡಿಕೆಗನುಗುಣವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ದಾಸ್ತಾನು ಮಾಡಿರಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲು ಜಾಗದ ಅಭಾವವಿದ್ದಲ್ಲಿ ಗೋದಾಮು, ಗ್ರಾಮ ಪಂಚಾಯಿತಿ ಭವನಗಳಲ್ಲಿ ದಾಸ್ತಾನು ಮಾಡಬೇಕೆಂದು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕಾಗಿ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಬಾರದು. ಬೀಜ ಮತ್ತು ಗೊಬ್ಬರ ಕೊರತೆ ಉಂಟಾದರೆ ಸಂಬಂಧಿಸಿದ ತಾಲೂಕು ಕೃಷಿ ಸಹಾಯಕ ನಿರ್ದೇಶಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ಮುಂಗಾರು ಪೂರ್ವದಲ್ಲಿಯೇ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ದಾಸ್ತಾನು ಮಾಡಿಕೊಂಡಲ್ಲಿ ರೈತರು ಬಿತ್ತನೆ ಕಾರ್ಯವನ್ನು ಸಕಾಲದಲ್ಲಿ ಕೈಗೊಳ್ಳಲು ಅನುಕೂಲವಾಗುತ್ತದೆ. ರೈತರಿಂದ ಯಾವುದೇ ದೂರುಗಳು ಬಾರದಂತೆ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆಯಾಗಬೇಕು. ಅಧಿಕೃತ ಮಾರಾಟಗಾರರಿಂದಲೇ ನಿಗಧಿತ ದರದಲ್ಲಿ ಬೀಜ, ಗೊಬ್ಬರ ಖರೀದಿಸುವ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕೆಂದು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಜಿಲ್ಲೆಯ ಎಲ್ಲ ತಾಲೂಕು ಕೃಷಿ ಸಹಾಯಕ ನಿರ್ದೇಶಕರಿಂದ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ದಾಸ್ತಾನು, ಬಿತ್ತನೆ ಪ್ರದೇಶದ ಗುರಿ, ಮಳೆ ವಿವರದ ತಾಲೂಕುವಾರು ಮಾಹಿತಿ ಪಡೆದು ಮಾತನಾಡುತ್ತಾ ರೈತರಿಗೆ ಸಕಾಲದಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಪೂರೈಕೆಯಾಗದಿದ್ದಲ್ಲಿ ಮುಕ್ತ ಮಾರುಕಟ್ಟೆಗೆ ಹೋಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಮೇ ಅಂತ್ಯದೊಳಗಾಗಿ ಅಗತ್ಯ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ದಾಸ್ತಾನು ಮಾಡಲು ಕ್ರಮವಹಿಸಬೇಕೆಂದು ನಿರ್ದೇಶಿಸಿದರು.
ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ನಿಗಧಿತ ದರದಲ್ಲಿಯೇ ವಿತರಿಸಬೇಕು. ವಿತರಣೆಯಲ್ಲಿ ಯಾವುದೇ ಗೊಂದಲಗಳುಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಬಿತ್ತನೆ ಬೀಜದ ದಾಸ್ತಾನು ಪ್ರಮಾಣವನ್ನು ಹಿಂದಿನ ಸಾಂಪ್ರದಾಯಿಕ ಪದ್ಧತಿ ಅನ್ವಯ ನಿಗಧಿಪಡಿಸದೆ ರೈತ ಸಮುದಾಯವನ್ನು ಖುದ್ದಾಗಿ ಭೇಟಿ ಮಾಡಿ ವಾಸ್ತವವಾಗಿ ಅಗತ್ಯವಿರುವ ಬೀಜದ ಪ್ರಮಾಣವನ್ನು ನಿರ್ಧರಿಸಿ ದಾಸ್ತಾನು ಮಾಡಬೇಕೆಂದರಲ್ಲದೆ ಜಿಲ್ಲೆಯ ಮುಖ್ಯ ಬೆಳೆಗಳಾದ ರಾಗಿ, ಶೇಂಗಾ ಬೆಳೆಯ ಬಿತ್ತನೆ ಬೀಜವನ್ನು ಬೇಡಿಕೆಗಿಂತ ಹೆಚ್ಚುವರಿ ಪ್ರಮಾಣದಲ್ಲಿ ದಾಸ್ತಾನು ಮಾಡಬೇಕೆಂದು ಸಲಹೆ ನೀಡಿದರು.
ಜಂಟಿ ಕೃಷಿ ನಿರ್ದೇಶಕ ರಮೇಶ್ ಮಾತನಾಡಿ ಜಿಲ್ಲೆಯಲ್ಲಿ ಮೇ ಮಾಹೆಯಲ್ಲಿ ಉತ್ತಮ ಮಳೆಯಾಗಿದ್ದರೂ ಸಹ ಪೂರ್ವ ಮುಂಗಾರು ಬಿತ್ತನೆಗೆ ತಡವಾಗಿದೆ ಕಳೆದ ಮಾರ್ಚ್, ಏಪ್ರಿಲ್ ಮಾಹೆ ಯಲ್ಲಿ ಮಳೆಯಾಗಿದ್ದರೆ ಸಕಾಲದಲ್ಲಿ ಪೂರ್ವ ಮುಂಗಾರು ಬಿತ್ತನೆ ಮಾಡಬಹುದಾಗಿತ್ತು ಎಂದು ಮಾಹಿತಿ ನೀಡಿದರಲ್ಲದೆ ಜೂನ್ 10 ರ ನಂತರ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ರೈತರು ತಮ್ಮ ಜಮೀನನ್ನು ಹದಗೊಳಿಸುವಲ್ಲಿ ನಿರತರಾಗಿದ್ದಾರೆ ಎಂದು ತಿಳಿಸಿದರು.
ಕಳೆದ ಮೂರು ವರ್ಷಗಳಲ್ಲಿ ಇದೇ ಅವಧಿಯ ಮಳೆ ವರದಿಯನ್ನು ಅವಲೋಕಿಸಿದಾಗ 2021ರಲ್ಲಿ 164.5 ಮಿ.ಮೀ., 2022ರಲ್ಲಿ 126 ಮಿ.ಮೀ. ಹಾಗೂ 2023ರಲ್ಲಿ 139.7 ಮಿ.ಮೀ. ಸರಾಸರಿ ಮಳೆಯಾಗಿದ್ದು, 2024ರ ಮೇ ಮಾಹೆಯಲ್ಲಿ ಈವರೆಗೆ 193.8 ಮಿ.ಮೀ.ನಷ್ಟು ದಾಖಲೆ ಮಳೆಯಾಗಿರುವುದರಿಂದ ರೈತರ ಮನದಲ್ಲಿ ಪ್ರಸಕ್ತ ವರ್ಷ ಉತ್ತಮ ಕೃಷಿ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಬಹುದೆಂಬ ಭರವಸೆಯನ್ನು ಮೂಡಿಸಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರಮುಖ ಬೆಳೆಗಳಾದ ಭತ್ತ, ಜೋಳ, ರಾಗಿ, ಸಿರಿಧಾನ್ಯ, ಮುಸುಕಿನ ಜೋಳ, ದ್ವಿದಳ ಧಾನ್ಯ, ಎಣ್ಣೆಕಾಳು, ವಾಣಿಜ್ಯ ಬೆಳೆ ಸೇರಿದಂತೆ 3,20,455 ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಒಟ್ಟು 28,805 ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದ್ದು, 765.70 ಕ್ವಿಟಾಲ್ ಬಿತ್ತನೆ ಬೀಜವನ್ನು ಈಗಾಗಲೇ ದಾಸ್ತಾನು ಮಾಡಲಾಗಿದೆ. ಈಗಾಗಲೇ 106.45 ಕ್ವಿಂಟಾಲ್ ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಲಾಗಿದೆ. ವಿವಿಧ ಸರಬರಾಜು ಸಂಸ್ಥೆಗಳಲ್ಲಿ 52,217 ಕ್ವಿಂಟಾಲ್ ಬೀಜ ಲಭ್ಯವಿದ್ದು, ಬರುವ ಜೂನ್ ಮಾಹೆ 1 ರೊಳಗಾಗಿ ಹಂತ ಹಂತವಾಗಿ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗುವುದು ಎಂದು ಸಭೆಗೆ ವಿವರಿಸಿದರು.
ಜಿಲ್ಲೆಯಲ್ಲಿ ಯೂರಿಯಾ, ಡಿಎಪಿ, ಎಂಓಪಿ, ಎನ್‌ಪಿಕೆಎಸ್, ಎಸ್‌ಎಸ್‌ಪಿ ಸೇರಿದಂತೆ ಒಟ್ಟು 70,264 ಮೆಟ್ರಿಕ್ ಟನ್ ರಸಗೊಬ್ಬರದ ಬೇಡಿಕೆ ಇದ್ದು, ಈಗಾಗಲೇ 8,033 ಮೆ.ಟನ್ ರಸಗೊಬ್ಬರವನ್ನು ವಿತರಿಸಲಾಗಿದೆ. ಈವರೆಗೆ 50,160 ಮೆ.ಟನ್ ರಸಗೊಬ್ಬರ ವಿವಿಧ ಸಂಸ್ಥೆಗಳಿಂದ ಸರಬರಾಜಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ್ ಬಿ. ಕರಾಳೆ ಜಿಲ್ಲಾ ಕೃಷಿ ಉಪ ನಿರ್ದೇಶಕ ಅಶೋಕ್, ಎಲ್ಲ ತಾಲೂಕು ಮಟ್ಟದ ಸಹಾಯಕ ಕೃಷಿ ನಿರ್ದೇಶಕರು ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ವಿಜಯನಗರ | ಹಂಪಿಯ (Hampi) ಪ್ರಸಿದ್ಧ ವಿರೂಪಾಕ್ಷ ದೇವಸ್ಥಾನದ (Virupaksha Temple) ಬಳಿಯ ಸಾಲು ಮಂಟಪದ ಒಂದು ಭಾಗ ಮಂಗಳವಾರ ರಾತ್ರಿ ಕುಸಿದಿದೆ. ಹಂಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಒಂದು ಮಂಟಪ (Hall) ಕುಸಿದಿರಬಹುದು ಎಂದು ಅಧಿಕಾರಿಗಳು ನಂಬಿದ್ದಾರೆ. ವಿರೂಪಾಕ್ಷ ದೇವಸ್ಥಾನದ ಬಳಿ ಇರುವ ಇಂತಹ ಕನಿಷ್ಠ ಮೂರ್ನಾಲ್ಕು ಮಂಟಪಗಳು (Hall) ಶಿಥಿಲಾವಸ್ಥೆಯಲ್ಲಿದ್ದು ಬೀಳುವ ಹಂತದಲ್ಲಿವೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.
ಮಂಗಳವಾರ ನಾಲ್ಕು ಮಂಟಪಗಳು ಕುಸಿದಿವೆ ಎಂದು ಮಾರ್ಗದರ್ಶಕರು ಮತ್ತು ಸ್ಥಳೀಯರು ಹೇಳಿಕೊಂಡರೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಕೇವಲ ಒಂದು ಮಂಟಪ ಮಾತ್ರ ಶಿಥಿಲಗೊಂಡಿದೆ ಎಂದು ಹೇಳುತ್ತದೆ.
ದೇವಸ್ಥಾನದ ಬಳಿಯ ಸಾಲು ಮಂಟಪದ ನವೀಕರಣ ಕಾಮಗಾರಿಯನ್ನು ಎಎಸ್‌ಐ ಕೈಗೆತ್ತಿಕೊಂಡಿದ್ದು, ಸದ್ಯ ರಸ್ತೆಯ ಎಡಭಾಗದಲ್ಲಿರುವ ಮಂಟಪಗಳನ್ನು ನವೀಕರಿಸುತ್ತಿದ್ದು, ಮಂಗಳವಾರ ರಾತ್ರಿ ಕುಸಿದು ಬಿದ್ದ ಮಂಟಪ ಬಲಭಾಗದಲ್ಲಿದೆ.
ಎಎಸ್‌ಐ ಹಂಪಿ ಸರ್ಕಲ್ ಇನ್‌ಸ್ಪೆಕ್ಟರ್ ನಿಹಾಲ್ ದಾಸ್ ಮಾತನಾಡಿ, “ಮಂಗಳವಾರ ಒಂದೇ ಒಂದು ಮಂಟಪ ಕುಸಿದಿದೆ, ಮೂರ್ನಾಲ್ಕು ಅಲ್ಲ. ಓಣಿಯಲ್ಲಿ ಹಲವಾರು ಮಂಟಪಗಳು ಬೀಳುವ ಹಂತದಲ್ಲಿರುವುದು ನಿಜ. ASI ಹಂತ ಹಂತವಾಗಿ ಪುನಃಸ್ಥಾಪನೆ ಕಾರ್ಯವನ್ನು ಕೈಗೆತ್ತಿಕೊಂಡಿದೆ. ನಾವು ಒಂದೇ ಸಮಯದಲ್ಲಿ ಎಲ್ಲಾ ಮಂಟಪಗಳ ಪುನಃಸ್ಥಾಪನೆ ಕಾರ್ಯವನ್ನು ಕೈಗೊಳ್ಳಲು ಸಾಧ್ಯವಿಲ್ಲ, ಎಎಸ್‌ಐ ಅಷ್ಟು ಬಜೆಟ್ ಅಥವಾ ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ಹೊಂದಿಲ್ಲ. ಐತಿಹಾಸಿಕ ಸ್ಮಾರಕಗಳನ್ನು ಯಥಾಸ್ಥಿತಿಯಲ್ಲಿ ರಕ್ಷಿಸಲು ಶ್ರಮಿಸಲಾಗುತ್ತಿದೆ ಎಂದರು.
ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸೇನೆ ಅಧ್ಯಕ್ಷ ವಿಶ್ವನಾಥ ಮಾಳಗಿ ಮಾತನಾಡಿ, ದೇವಸ್ಥಾನಗಳ ಬಳಿಯಿರುವ ಮಂಟಪಗಳನ್ನು ಎಎಸ್‌ಐ ಜೀರ್ಣೋದ್ಧಾರ ಮಾಡುತ್ತಿದ್ದು, ಹದಗೆಟ್ಟಿರುವ ಸ್ಮಾರಕಗಳ ಜೀರ್ಣೋದ್ಧಾರಕ್ಕೆ ಅಧಿಕಾರಿಗಳು ಮುಂದಾಗಿದ್ದರೆ ಜಾಣತನ ಎನಿಸುತ್ತಿತ್ತು.
“ಬಿದ್ದುಹೋದ ಸ್ಮಾರಕಗಳನ್ನು ಅವುಗಳ ಹಿಂದಿನ ಹಂತಕ್ಕೆ ಮರುಸ್ಥಾಪಿಸುವುದು ಅಸಾಧ್ಯವಾಗಿದೆ. ಇದೇ ರೀತಿ ಮುಂದುವರಿದರೆ ಮುಂದಿನ ಪೀಳಿಗೆ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಲಾಖೆಯು (ಎಎಸ್‌ಐ) ತಮ್ಮ ಕಾರ್ಯಯೋಜನೆಯ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಮತ್ತು ಆ ಸ್ಮಾರಕಗಳನ್ನು ಆದ್ಯತೆಯ ಆಧಾರದ ಮೇಲೆ ಪುನಃಸ್ಥಾಪಿಸಬೇಕು, ”ಎಂದು ಅವರು ಹೇಳಿದರು.
ಶಿವನ ದೇವಸ್ಥಾನದಲ್ಲಿ ಗೋಡೆಯ ಒಂದು ಭಾಗ ಕುಸಿದು ಒಂದು ವರ್ಷಕ್ಕೂ ಹೆಚ್ಚು ಸಮಯವಾಗಿದೆ ಎಂದು ಇನ್ನೊಬ್ಬ ಮಾರ್ಗದರ್ಶಿ ಹೇಳಿದರು. “ಎಎಸ್‌ಐ ಅಧಿಕಾರಿಗಳಿಗೆ ಇಂದಿಗೂ ಆ ಸ್ಮಾರಕವನ್ನು ಪುನಃಸ್ಥಾಪಿಸಲು ಸಾಧ್ಯವಾಗಿಲ್ಲ. ಭವಿಷ್ಯದಲ್ಲಿ ಪುನಃಸ್ಥಾಪನೆಗಾಗಿ ಶಿಲಾಖಂಡರಾಶಿಗಳನ್ನು ತೆಗೆದುಹಾಕಲು ಮತ್ತು ಕಲ್ಲುಗಳನ್ನು ಗುರುತಿಸಲು ಇಲಾಖೆಗೆ ಸಾಧ್ಯವಾಗಿಲ್ಲ. ಇದೇ ರೀತಿ ಮುಂದುವರಿದರೆ ಹಂಪಿಯಲ್ಲಿರುವ ಎಲ್ಲ ಪ್ರಮುಖ ಸ್ಮಾರಕಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದರು.
ಮೈಸೂರು | ಮೈಸೂರಿನ (Mysore) ಯರಗನಹಳ್ಳಿಯಲ್ಲಿ ಮಂಗಳವಾರ ರಾತ್ರಿ ಮನೆಯಲ್ಲಿ ಸಿಲಿಂಡರ್ ಸೋರಿಕೆಯಾಗಿ (Cylinder leakage) ಎಲ್‌ಪಿಜಿ ಗ್ಯಾಸ್ (LPG gas) ಸೇವಿಸಿ ಉಸಿರುಗಟ್ಟಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.
ಮೃತರನ್ನು ಸಿದ್ದಾರ್ಥನಗರದ ಜೆಎಸ್‌ಎಸ್ ಶಾಲೆಯ ಪಕ್ಕದಲ್ಲಿ ಲಾಂಡ್ರಿ ಅಂಗಡಿ ನಡೆಸುತ್ತಿದ್ದ ಕುಮಾರಸ್ವಾಮಿ (45), ಅವರ ಪತ್ನಿ ಮಂಜುಳಾ (39) ಮತ್ತು ದಂಪತಿಯ ಮಕ್ಕಳಾದ ಅರ್ಚನಾ (19) ಮತ್ತು ಸ್ವಾತಿ (17) ಎಂದು ಗುರುತಿಸಲಾಗಿದೆ.
ಬೆಳಗ್ಗೆ 9 ಗಂಟೆಯಾದರೂ ಮನೆಯವರು ಮನೆಯಿಂದ ಹೊರಗೆ ಕಾಲಿಡದ ಕಾರಣ ನೆರೆಹೊರೆಯವರು ಅನುಮಾನಗೊಂಡು ಪರಿಶೀಲಿಸಿದಾಗ ಎಲ್‌ಪಿಜಿ ಗ್ಯಾಸ್ ವಾಸನೆ ಬಂದಿದ್ದು, ಘಟನೆ ಬೆಳಕಿಗೆ ಬಂದಿದೆ. ಮನೆ ಚಿಕ್ಕದಾಗಿದ್ದು, ಕಿಟಕಿಗಳು ಮುಚ್ಚಿದ ಕಾರಣ ಮತ್ತು ಸರಿಯಾದ ಗಾಳಿ ಇಲ್ಲದ ಕಾರಣ ಈ ಘಟನೆ ಸಂಭವಿಸಿದೆ ಎಂದು ನಜರ್ಬಾದ್ ಪೊಲೀಸರು ತಿಳಿಸಿದ್ದಾರೆ.
ಎಫ್‌ಎಸ್‌ಎಲ್ ತಂಡದೊಂದಿಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶವಾಗಾರಕ್ಕೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಿದ್ದಾರೆ.
ಮೈಸೂರು ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್, ನಜರ್ ಬಾದ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಸಹಿತ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು | ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರ ಪಾಸ್‌ಪೋರ್ಟ್ ರದ್ದು (Cancellation of passport) ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಈವರೆಗೂ ಸ್ಪಂದಿಸಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ (Dr. G. Parameshwar) ಅವರು ತಿಳಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದು ಮಾಡುವಂತೆ ಮುಖ್ಯಮಂತ್ರಿಯವರು ಪತ್ರ ಬರೆದಿದ್ದರೆ. ಎಸ್ಐಟಿ ಪತ್ರ ಬರೆದಿದೆ. ಈವರೆಗೂ ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಕಾನೂನಿನ ಚೌಕಟ್ಟಿನಲ್ಲಿ ಸಹಾಯ ಮಾಡಬೇಕು. ಬರೀ ಟೀಕೆ ಮಾಡಿದರೆ ಅರ್ಥವಿಲ್ಲ. ಪ್ರಜ್ವಲ್ ರೇವಣ್ಣ ಅವರ ಮೇಲೆ ವಾರಂಟ್ ಜಾರಿ ಮಾಡಿರುವುದನ್ನು ತಿಳಿಸಲಾಗಿದೆ. ವಾರಂಟ್ ಜಾರಿಯಾದ ನಂತರ ಪಾಸ್‌ಪೋರ್ಟ್ ರದ್ದುಗೊಳಿಸುವುದು ಕೇಂದ್ರ ಸರ್ಕಾರದ ಕರ್ತವ್ಯ ಎಂದು ಹೇಳಿದರು.
ಉಪಮುಖ್ಯಮಂತ್ರಿಯವರದ್ದು ಎನ್ನಲಾದ ಆಡಿಯೋ ಕುರಿತು ಹೆಚ್.ಡಿ.ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು ಪ್ರತಿಯೊಂದಕ್ಕು ಮಾತನಾಡುತ್ತಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ ಎಸ್ಐಟಿ ಏನೆಲ್ಲ ಕೆಲಸ ಮಾಡಬೇಕೋ ಅದನ್ನು ಮಾಡುತ್ತಿದೆ. ಕುಮಾರಸ್ವಾಮಿ ಅವರು ತನಿಖೆ ಹೀಗೆ ನಡೆಯಬೇಕು, ಹಾಗೇ ಮಾಡಬೇಕು ಅಂತ ಹೇಳಿದ ಹಾಗೇ ಕಾಣುತ್ತಿದೆ ಎಂದು ಆರೋಪಿಸಿದರು.
ಬಿಜೆಪಿಯವರ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ ಎಂಬುದನ್ನು ನಾನು ಮತ್ತು ಮುಖ್ಯಮಂತ್ರಿಯವರು ಅಂಕಿ-ಅಂಶವನ್ನು ಪ್ರಕಟಿಸಿದ್ದೇವೆ. ಯಾರ ಕಾಲದಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗಿದ್ದವು ಎಂಬುದಕ್ಕೆ ಅಂಕಿ-ಅಂಶಗಳಿವೆ. ಅದಕ್ಕೆ ಬಿಜೆಪಿಯವರು ಮೊದಲು ಉತ್ತರ ನೀಡಲಿ ಎಂದರು.
ದಕ್ಷಿಣ ಕನ್ನಡ | ಪೊಲೀಸರ (Police) ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಶಾಸಕ ಹರೀಶ್ ಪೂಂಜಾ (Harish Poonja) ಅವರನ್ನು ಬಂಧಿಸಲು ಪೊಲೀಸರು ಸಜ್ಜಾಗಿದ್ದಾರೆ. ಮೇ 22 ರಂದು ಬೆಳಿಗ್ಗೆ ಪೂಂಜಾ ಅವರ ನಿವಾಸದಲ್ಲಿ ಸಾಕಷ್ಟು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು. ಅವರ ಮನೆಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಅವರ ನಿವಾಸಕ್ಕೆ ತೆರಳುವ ರಸ್ತೆಯಲ್ಲೂ ಪೊಲೀಸ್ ಬಂದೋಬಸ್ತ್ (Police Station) ಏರ್ಪಡಿಸಲಾಗಿತ್ತು. ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಕಾರ್ಯಕರ್ತರು ಪೂಂಜಾ ಅವರ ಮನೆ ಮುಂದೆ ಜಮಾಯಿಸಲಾರಂಭಿಸಿದ್ದರು.
ಅಕ್ರಮ ಕಲ್ಲುಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಗಳಿಬ್ಬರನ್ನು ಬಿಡುಗಡೆ ಮಾಡುವಂತೆ ಬೆಳ್ತಂಗಡಿ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಇತರ ಸಿಬ್ಬಂದಿ ಮೇಲೆ ಬಲವಂತವಾಗಿ ಮತ್ತು ಪ್ರಭಾವ ಬೀರಲು ಯತ್ನಿಸಿದ ಆರೋಪದ ಮೇಲೆ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಅಕ್ರಮ ಕಲ್ಲುಗಣಿಗಾರಿಕೆ ಪ್ರಕರಣದ ಇಬ್ಬರು ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಮೇ 18ರ ರಾತ್ರಿ ಶಾಸಕ ಪೂಂಜಾ ಹಲವು ಅನುಯಾಯಿಗಳೊಂದಿಗೆ ಠಾಣೆಗೆ ಅಪ್ರಜ್ಞಾಪೂರ್ವಕವಾಗಿ ನುಗ್ಗಿ ಅಧಿಕಾರಿಗಳನ್ನು ಬೆದರಿಸಿ ತೀವ್ರ ವಾಗ್ವಾದ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 20ರಂದು ತಾಲೂಕು ಆಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಪೂಂಜಾ ಹಾಗೂ ಬೆಂಬಲಿಗರ ವಿರುದ್ಧ ಎರಡನೇ ಪ್ರಕರಣ ದಾಖಲಾಗಿತ್ತು.
ಮನರಂಜನೆ | ಸೋಮವಾರ ತಡರಾತ್ರಿ ಮೈಸೂರು (Mysore) ಜಿಲ್ಲೆಯ ಬನ್ನೂರು ಬಳಿಯ ತುರಗನೂರಿನಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕಿ ನಟಿ ವಿದ್ಯಾ (Actress Vidya) ಅವರನ್ನು ಆಕೆಯ ಪತಿ ನಂದೀಶ್ (Nandish) ಕೊಲೆ ಮಾಡಿ ಪರಾರಿಯಾಗಿರುವುದಾಗಿದ್ದಾನೆ. ಇನ್ನೂ ಕೊಲೆಗೆ (murder) ಕೌಟುಂಬಿಕ ಕಲಹ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ವಿದ್ಯಾ ಅವರು ಮೈಸೂರು ನಗರ ಕಾಂಗ್ರೆಸ್ ಮಹಿಳಾ ಘಟಕದಲ್ಲಿ ಸಕ್ರಿಯರಾಗಿದ್ದರು. ಈ ಹಿಂದೆ ಬ್ಲಾಕ್ ಅಧ್ಯಕ್ಷರಾಗಿದ್ದ ಅವರು ಪ್ರಸ್ತುತ ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅದಲ್ಲದೆ ಸಿನಿಮಾದ ರಂಗದಲ್ಲೂ ಗುರುತಿಸಿಕೊಂಡಿದ್ದಾರೆ.
ನಿನ್ನೆ ತಡರಾತ್ರಿ ವಿದ್ಯಾ ಅವರು ತನ್ನ ಗಂಡನ ಮನೆಗೆ ಹೋಗಿದ್ದಾರೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿತ್ತು. ಜಗಳದ ನಡುವೆ ನಂದೀಶ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ. ತಲೆಗೆ ಬಲವಾದ ಗಾಯಗಳಾಗಿದ್ದರಿಂದ ವಿದ್ಯಾ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಬನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಂಗಾಪುರ್ | ತೀವ್ರ ಪ್ರಕ್ಷುಬ್ಧತೆಯಿಂದಾಗಿ ಸಿಂಗಾಪುರ್ ಏರ್‌ಲೈನ್ಸ್ (Singapore Airlines) ವಿಮಾನವು (Plane) ಬ್ಯಾಂಕಾಕ್‌ನಲ್ಲಿ (Bangkok) ತುರ್ತು ಭೂಸ್ಪರ್ಶವಾಗಿ, ವಿಮಾನದಲ್ಲಿದ್ದ ಒಬ್ಬರು ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
“ಸಿಂಗಪೂರ್ ಏರ್ ಲೈನ್ಸ್ ವಿಮಾನ SQ321, ಲಂಡನ್ (ಹೀಥ್ರೂ) ನಿಂದ ಸಿಂಗಾಪುರಕ್ಕೆ 20 ಮೇ 2024 ರಂದು ಕಾರ್ಯನಿರ್ವಹಿಸುತ್ತಿತ್ತು, ಮಾರ್ಗದಲ್ಲಿ ತೀವ್ರ ಪ್ರಕ್ಷುಬ್ಧತೆಯನ್ನು ಎದುರಿಸಿತು. ವಿಮಾನವು ಬ್ಯಾಂಕಾಕ್‌ಗೆ ತಿರುಗಿತು ಮತ್ತು 21 ಮೇ 2024 ರಂದು ಸ್ಥಳೀಯ ಸಮಯ 15:45 ಗಂಟೆಗೆ ಇಳಿಯಿತು” ಎಂದು ಸಿಂಗಾಪುರ್ ಏರ್‌ಲೈನ್ಸ್ X ನಲ್ಲಿ ಪೋಸ್ಟ್‌ನಲ್ಲಿ ಬರೆದಿದೆ.
ವಿಮಾನದಲ್ಲಿದ್ದವರಿಗೆ ಗಾಯಗಳಾಗಿವೆ ಎಂದು ಏರ್‌ಲೈನ್ ದೃಢಪಡಿಸಿದೆ ಮತ್ತು ವಿಮಾನದಲ್ಲಿರುವ ಪ್ರಯಾಣಿಕರಿಗೆ ಎಲ್ಲಾ “ಸಂಭವನೀಯ ನೆರವು” ನೀಡಲಾಗುವುದು. ಸಿಂಗಾಪುರ್ ಏರ್ಲೈನ್ಸ್ ಮೃತರ ಕುಟುಂಬಕ್ಕೆ ತನ್ನ ಸಂತಾಪವನ್ನು ವ್ಯಕ್ತಪಡಿಸಿದೆ” ಎಂದು ಏರ್ಲೈನ್ಸ್ ತಿಳಿಸಿದೆ.