ವಿಜಯಪುರ | ಒಂದು ದೇಶ ಒಂದು ಚುನಾವಣೆ (One Nation one Election) ಮೂಲಕ ಸಣ್ಣ ಪಕ್ಷಗಳನ್ನು ಮುಗಿಸುವ ಹುನ್ನಾರ ಕೇಂದ್ರ ಸರ್ಕಾರ ಹೊಂದಿದೆ. ಟಿಎಂಸಿ, ಡಿಎಂಕೆ, ಎಸ್ ಪಿ, ಕಮ್ಯುನಿಷ್ಟ್ ಸೇರಿದಂತೆ ಪ್ರಾದೇಶಿಕ ಪಕ್ಷಗಳಿಂದ ಇಂಡಿಯಾ ಒಕ್ಕೂಟದ ಸಂಖ್ಯಾಬಲ ಹೆಚ್ಚಾಗಿದೆ. ಹೀಗಾಗಿ ಈ ಪಕ್ಷಗಳನ್ನು ಮುಗಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ವಿಜಯಪುರದಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಒಂದು ದೇಶ ಒಂದು ಚುನಾವಣೆಗೆ ಅನುಮೋದನೆ ನೀಡಿರುವ ಬಗ್ಗೆ ಕೇಳಿದಾಗ, ಒಂದು ದೇಶ ಒಂದು ಚುನಾವಣೆಗೆ ಕಾಂಗ್ರೆಸ್ ಪಕ್ಷ ಈಗಾಗಲೇ ವಿರೋಧ ವ್ಯಕ್ತಪಡಿಸಿದೆ. ಇದಕ್ಕೆ ಸಂಸತ್ತಿನಲ್ಲಿ ಅನುಮೋದನೆ ಪಡೆಯಲು ಕೇಂದ್ರ ಎನ್ ಡಿಎ ಸರ್ಕಾರಕ್ಕೆ ಸರಿಯಾದ ಸಂಖ್ಯಾಬಲವಿಲ್ಲ. ಮೂರನೇ ಎರಡು ಸಂಖ್ಯಾಬಲ ಬೇಕಾಗಿದ್ದು, ಅದನ್ನು ಹೇಗೆ ಸಾಧಿಸುತ್ತಾರೋ ಗೊತ್ತಿಲ್ಲ ಎಂದಿದ್ದಾರೆ.
ಕೆಲವು ರಾಜ್ಯಗಳಲ್ಲಿ ಈಗಷ್ಟೇ ಚುನಾವಣೆಯಾಗಿದೆ, ಮತ್ತೆ ಕೆಲವು ಕಡೆಗಳಲ್ಲಿ ಚುನಾವಣೆಯಾಗಿ ಎರಡು, ಮೂರು ವರ್ಷಗಳಾಗಿವೆ. ಇವುಗಳನ್ನು ಹೇಗೆ ಮಾಡುತ್ತಾರೆ ಗೊತ್ತಿಲ್ಲ. ಇದು ಕಷ್ಟಕರವಾದ ಪ್ರಕ್ರಿಯೆ. ಅವರು ತಮ್ಮದೇ ಆದ ಅಜೆಂಡಾ ಇಟ್ಟುಕೊಂಡು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ರಾಹುಲ್ ಗಾಂಧಿ ಅವರು ಈ ವಿಚಾರವಾಗಿ ಪಕ್ಷದ ನಿಲುವು ತಿಳಿಸಿದ್ದು, ನಾವು ಅದನ್ನು ಸಮರ್ಥಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.