ತುಮಕೂರು | ಮನೆಗಳ ಮೇಲ್ಚಾವಣಿ, ಬಾಲ್ಕನಿ ಹಾಗೂ ಇನ್ನಿತರ ಸ್ಥಳಗಳಿಂದ ಬರುವ ಮಳೆ ನೀರನ್ನು ಯುಜಿಡಿ ಪೈಪ್‌ಲೈನ್‌ಗೆ ಸಂಪರ್ಕಿಸಿರುವವರು 15 ದಿನಗಳೊಳಗಾಗಿ ಸಂಪರ್ಕವನ್ನು ಕಡಿತಗೊಳಿಸಿ ಮಳೆ ನೀರನ್ನು ಚರಂಡಿಗೆ ಹೋಗುವಂತೆ ಸಂಪರ್ಕ ನೀಡಲು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಳೆ ಬಂದಂತಹ ಸಂದರ್ಭದಲ್ಲಿ ಯುಜಿಡಿ ಕೊಳವೆ ಸಾಲುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ತುಮಕೂರು ನಗರ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಯುಜಿಡಿ ಕೊಳವೆ ಸಾಲನ್ನು ಮಳೆ ನೀರನ್ನು ಹೊರತುಪಡಿಸಿ ವಿನ್ಯಾಸಗೊಳಿಸಲಾಗಿರುತ್ತದೆ. ಆಗಾಗಿ ಪೈಪ್‌ಲೈನ್‌ನಲ್ಲಿ ಉಂಟಾಗುವ ಅಧಿಕ ಒತ್ತಡದಿಂದ ತ್ಯಾಜ್ಯ ನೀರು ರಸ್ತೆಯ ಮಟ್ಟಕ್ಕಿಂತ ಕೆಳಗಿರುವ ಮನೆಗಳಿಗೆ ಹಿಮ್ಮುಖವಾಗಿ ಹರಿದು ಆಸ್ತಿ-ಪಾಸ್ತಿಗೆ ಹಾನಿಯನ್ನುಂಟು ಮಾಡುತ್ತಿರುತ್ತದೆ ಹಾಗೂ ರಸ್ತೆಗಳಲ್ಲಿನ ಮೆಷಿನ್ ಹೋಲ್‌ಗಳು ಹೊರ ಉಕ್ಕಿ ಸಾರ್ವಜನಿಕರ ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯನ್ನುಂಟು ಮಾಡುತ್ತಿರುತ್ತದೆ.
ಮುಂದಿನ ದಿನಗಳಲ್ಲಿ ಪಾಲಿಕೆಯ ಅಧಿಕಾರಿಗಳು, ನೌಕರರು ಪರಿಶೀಲಿಸುವ ಸಂದರ್ಭದಲ್ಲಿ ಯಾರಾದರೂ ಮಳೆ ನೀರನ್ನು ಯುಜಿಡಿ ಕೊಳವೆ ಸಾಲಿಗೆ ಸಂಪರ್ಕಿಸಿರುವುದು ಕಂಡು ಬಂದಲ್ಲಿ ಪಾಲಿಕೆ ನಿಯಮಾನುಸಾರ ದಂಡ ವಿಧಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.