ಬೆಳಗಾವಿ | ಉತ್ತರ ಕರ್ನಾಟಕದ ಪ್ರಮುಖ ಯೋಜನೆ ಕೃಷ್ಣಾ ಮೇಲ್ದಂಡೆ ಯೋಜನೆಗೆ 50 ಸಾವಿರ ಕೋಟಿ ಕೊಡುವುದಾಗಿ ಕೃಷ್ಣೆಯ ಮೇಲೆ ಕಾಂಗ್ರೆಸ್ ನವರು ಆಣೆ ಮಾಡಿದ್ದರು. ಆದರೆ, ಐದು ವರ್ಷ ಯಾವುದೇ ಯೋಜನೆ ಪೂರ್ಣಗೊಳಿಸಲಿಲ್ಲ. ಇದು ವಚನ ಭ್ರಷ್ಟ ಪಕ್ಷ ಕಾಂಗ್ರೆಸ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಇಂದು ಚಿಕ್ಕೋಡಿ ಸದಲಗಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಕತ್ತಿ ಪರ ಪ್ರಚಾರ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತಮ್ಮೊ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಈ ಭಾಗದಲ್ಲಿ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಯನ್ನು ನಾವೇ ಆರಂಭಿಸಿದ್ದು, ನಾವೇ ಪೂರ್ಣಗೊಳಿಸುವ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ ಎಂದರು.
ಮಹಾಲಕ್ಷ್ಮೀ ಏತ ನೀರಾವರಿಗೆ ಮೊದಲು 0.5 ನಂತರ 0.9 ಟಿಎಂಸಿ ನೀರು ಪಡೆಯಲು ಡಿಪಿಆರ್ ಮಾಡಲು ಸಿದ್ದ ಮಾಡಿದ್ದೇವು. ನಂತರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು. ಈ ಭಾಗದ ಶಾಸಕರು ಉಪ ಚುನಾವಣೆಯಲ್ಲಿ ಕ್ಷೇತ್ರವನ್ನು ದತ್ತು ತೆಗೆದುಕೊಳ್ಳುವುದಾಗಿ ಹೇಳಿದರು. ಆದರೆ ಯಾವುದೇ ಕೆಲಸ ಮಾಡಲಿಲ್ಲ. ನಂತರ ನಾವು ಅಧಿಕಾರಕ್ಕೆ ಬಂದ ಮೇಲೆ 200 ಕೋಟಿ ರೂ. ಯೋಜನೆಯ ಡಿಪಿಆರ್ ಮಾಡಿ ಬಂದಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಮಹಾಲಕ್ಷ್ಮೀ ಏತ ನೀರಾವರಿಯನ್ನು ರಮೇಶ್ ಕತ್ತಿಯವರ ಅಧ್ಯಕ್ಷತೆಯಲ್ಲಿಯೇ ಮಹಾಂತೇಶ್ ಕವಠಗಿಮಠ ಅವರ ಆಶಿರ್ವಾದದಿಂದ ನಾವೇ ಯೋಜನೆಗೆ ಚಾಲನೆ ನೀಡುತ್ತೇವೆ. ಪ್ರವಾಹ ಬಂದ ಸಂದರ್ಭದಲ್ಲಿ ಬಹಳಷ್ಟು ಜನರು ಮನೆಗಳನ್ನು ಕಳೆದುಕೊಂಡಿದ್ದರು. ನಿರಾಶ್ರಿತರಿಗೆ 10 ಸಾವಿರ ಮನೆಗಳನ್ನು ಬೆಳಗಾವಿ ಜಿಲ್ಲೆಗೆ ನೀಡಲಾಯಿತು. ಚಿಕ್ಕೋಡಿ ತಾಲೂಕಿನಲ್ಲಿ 6000 ಮನೆಗಳನ್ನು ನಿರ್ಮಾಣ ಮಾಡಿದ್ದೇವೆ. ಚಿಕ್ಕೋಡಿ ತಾಲೂಕಿನಲ್ಲಿ ಬಿಜೆಪಿ ಸರ್ಕಾರದ ಹಣ ಖರ್ಚು ಮಾಡಿದ್ದೇವೆ.
ಮಳೆ, ಪ್ರವಾಹ ಬಂದರೂ ಎಲ್ಲವನ್ನೂ ನಾನೇ ಮಾಡಿದ್ದೇನೆ ಎಂದು ಹೇಳಿಕೊಂಡು ತಿರುಗಾಡುತ್ತಾರೆ. ಜನರಿಗೆ ಯಾರು ಸ್ಪಂದಿಸುತ್ತಾರೆ. ಯಾರು ಪರಿಹಾರ ನೀಡುತ್ತಾರೆ. ಅವರಿಗೆ ಅವಕಾಶ ನೀಡಿ ಎಂದರು.
ಒಣ ಬೇಸಾಯಕ್ಕೆ 13 ಸಾವಿರ ರೂ. ನೀಡಿದ್ದೇವೆ. ಒಂದೇ ತಿಂಗಳಲ್ಲಿ ರೈತರ ಖಾತೆಗಳಿಗೆ ಹಣ ನೀಡಿದ್ದೇವೆ. ನೀರಾವರಿ ಜಮೀನಿಗೆ 15 ಸಾವಿರ ದಿಂದ 25 ಸಾವಿರ, ತೋಟಗಾರಿಕೆ ಬೆಳೆಗಳಿಗೆ 18 ಸಾವಿರದಿಂದ 28 ಸಾವಿರಕ್ಕೆ ಹೆಚ್ಚಳ ಮಾಡಿದ್ದೇವೆ ಎಂದರು.
ಕಾಂಗ್ರೆಸ್ ನವರು ದೀನ ದಲಿತರು, ಹಿಂದುಳಿದವರನ್ನು ಹೀನಾಯವಾಗಿ ನಡೆಸಿಕೊಂಡು ಬಂದಿದ್ದಾರೆ. ಅವರ ಮೀಸಲಾತಿ ಹೆಚ್ಚಳ ಮಾಡಲು ಹೋರಾಟ ನಡೆಸಿದರೂ, ಅವರು ಮಾಡಲಿಲ್ಲ. ನಾನು ಮೀಸಲಾತಿ ಹೆಚ್ಚಳ ಮಾಡಿ ಸಾಮಾಜಿಕ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಅವಧಿಯಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಗ ಬಾರದ ರಾಹುಲ್ ಗಾಂಧಿ ಈಗ ಕೂಡಲ ಸಂಗಮಕ್ಕೆ ಬಂದಿದ್ದರು. ರೈತರು ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಬರಲಿಲ್ಲ. ಇಲ್ಲಿ ಮತಕ್ಕೆ ಸ್ವಾಭಿಮಾನದ ಬೆಲೆ ಇದೆ. ಅದನ್ನು 500, 1000 ರೂ ಗೆ ಮಾರಾಟ ಮಾಡಬಾರದು ಎಂದರು.
ಚಿಕ್ಕೋಡಿ ಜನರು ಸ್ವಾಭಿಮಾನಿಗಳು ಹಣಕ್ಕೆ ಮತ ಮಾರಿಕೊಳ್ಳುವುದಿಲ್ಲ. ರಮೇಶ್ ಕತ್ತಿಯವರು ಅಭ್ಯರ್ಥಿಯಾದ ಕೂಡಲೇ ಜನರು ಸಾಕಷ್ಟು ಖುಷಿಯಾಗಿದ್ದಾರೆ. ಚಿಕ್ಕೋಡಿ ಅತ್ಯಂತ ಪ್ರಗತಿಯ ತಾಲೂಕಾಗಿದೆ. ಈ ಕ್ಷೇತ್ರದ ಜನರು ದಕ್ಷರಾಗಿರುವ ರಮೇಶ್ ಕತ್ತಿಯವರಿಗೆ ಮತ ನೀಡಲು ಸಿದ್ದರಾಗಿರಿ. ಮೇ 10 ಕ್ಕೆ ಮತ ಹಾಕಿ ಮೇ 13 ಕ್ಕೆ ವಿಜಯೊತ್ಸವ ಆಚರಿಸಬೇಕು. ರಮೇಶ್ ಕತ್ತಿಯವರನ್ನು 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು. ಬಿಜೆಪಿ ಸರ್ಕಾರ ಅದಿಕಾರಕ್ಕೆ ತರಲು ಬೆಂಬಲ ನೀಡಬೇಕು ಎಂದರು.
ಮಹಾರಾಷ್ಟ್ರದಿಂದ 3 ಟಿಎಂಸಿ ನೀರು ಬಿಡುಗಡೆ
ಮಹಾರಾಷ್ಟ್ರದಿಂದ ರಾಜ್ಯಕ್ಕೆ ನೀರು ಬಿಡುವಂತೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವು. ಅಮಿತ್ ಶಾ ಅವರಿಗೂ ಮನವಿ ಮಾಡಿದ್ದೇವು. ಈ ಭಾಗದ ಸಂಸದರೂ ಮನವಿ ಮಾಡಿದ್ದರು. ನಮ್ಮೆಲ್ಲರ ಮನವಿಗೆ ಸ್ಪಂದಿಸಿ 3 ಟಿಎಂಸಿ ನೀರು ನೀಡುವುದಾಗಿ ಮಹಾರಾಷ್ಟ್ರ ಸರ್ಕಾರ ಭರವಸೆ ನೀಡಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.