ಮಂಡ್ಯ | 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಟ ಮತ್ತು ರಾಜಕಾರಣಿ ಮುಖ್ಯಮಂತ್ರಿ ಚಂದ್ರು (Mukyamanthri Chandru) ಕನ್ನಡ ಶಾಲೆಗಳ ಅವಸಾನದ ಸ್ಥಿತಿಯನ್ನು ಬಿಚ್ಚಿಟ್ಟು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ಚಾಟಿ ಬೀಸಿದ್ದಾರೆ.
ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳಾದಿಯಾಗಿ ಎಲ್ಲರೂ ಕೂಡ ಕನ್ನಡ ಉಳಿಸುವ ಬೆಳೆಸುವ ಮಾತುಗಳನ್ನು ಹೇಳುತ್ತಿದ್ದಾರೆ. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಕನ್ನಡ ಶಾಲೆಗಳ ಸ್ಥಿತಿ ಹೇಗಿದೆ..? ಕನ್ನಡ ವಿದ್ಯಾರ್ಥಿಗಳ ಪರಿಸ್ಥಿತಿ ಹೇಗಿದೆ..? ಆಲೋಚನೆ ಮಾಡಬೇಕಾಗಿದೆ ಎಂದು ಧ್ವನಿ ಎತ್ತಿದ್ದಾರೆ.
ಇಂದು ಕನ್ನಡ ಶಾಲೆಗಳು ದಯನೀಯ ಪರಿಸ್ಥಿತಿಯಲ್ಲಿವೆ. ಶಿಕ್ಷಕರಿಲ್ಲದೆ ಸೊರಗುತ್ತಿವೆ. ಸುಮಾರು 60,000 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇವರನ್ನು ನೇಮಕ ಮಾಡಿಕೊಳ್ಳಲು ಸರ್ಕಾರದ ಬಳಿ ದುಡ್ಡಿಲ್ಲ. ಹೀಗಾದ ಮೇಲೆ ಕನ್ನಡ ಶಾಲೆಗಳು ಎಲ್ಲಿ ಉಳಿಯುತ್ತಿವೆ..? ಕನ್ನಡ ಮಕ್ಕಳು ಎಲ್ಲಿ ಉಳಿಯುತ್ತಾರೆ..? ಕನ್ನಡತನ ಹೇಗೆ ಉಳಿಯಲು ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಸರ್ಕಾರದಿಂದ ಕನ್ನಡದ ಉದ್ದಾರ ಸಾಧ್ಯವಿಲ್ಲ. ಕನ್ನಡ ಶಾಲೆಗಳ ಅಸ್ತಿತ್ವ ಉಳಿಯುವ ಭರವಸೆ ಇಲ್ಲ. ಶಿಕ್ಷಕರಿಗಂತು ಕೆಲಸ ಇಲ್ಲವೇ ಇಲ್ಲ ಎಂಬ ವಾಸ್ತವ ಪರಿಸ್ಥಿತಿಯನ್ನು ನಟ ಮುಖ್ಯಮಂತ್ರಿ ಚಂದ್ರು ಬಿಚ್ಚಿಟ್ಟಿದ್ದಾರೆ. ಇನ್ನು ಕರ್ನಾಟಕವನ್ನು ಅಭಿವೃದ್ಧಿ ಶೂನ್ಯ ರಾಜ್ಯವಾಗಿಸುವ ಕಾಂಗ್ರೆಸ್ ಸರ್ಕಾರ ಕನ್ನಡದ ಅಭಿವೃದ್ಧಿಯನ್ನು ಶೂನ್ಯವಾಗಿಸಲು ಹೊರಟಿದೆ ಎಂದು ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದಾರೆ.
ಒಟ್ಟಾರೆಯಾಗಿ ಯಾವುದೇ ಸರ್ಕಾರ ಬಂದರೂ ಕೂಡ ಕನ್ನಡದ ಬಗ್ಗೆ ಮಾತನಾಡುತ್ತಾರೆ ವಿನಹ ಕನ್ನಡದ ಬೆಳವಣಿಗೆಗೆ ಶಾಶ್ವತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ. ಹೀಗಾಗಿಯೇ ಕನ್ನಡ ಶಾಲೆಗಳ ವಿದ್ಯಾರ್ಥಿಗಳು ಫೇಲ್ ಆಗುತ್ತಿದ್ದಾರೆ. ಇದು ವಿದ್ಯಾರ್ಥಿಯ ಫೇಲ್ ಅಲ್ಲ, ಪೋಷಕರ ಫೇಲ್ ಅಲ್ಲ, ಇದು ಸರ್ಕಾರದ ಫೇಲ್ ಎಂದು ಹೇಳಿದ್ದಾರೆ.