ತುಮಕೂರು | ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಹಾಗೂ ಪಾರ್ಸಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ (Minority students) 25,000 ರೂ.ಗಳ ವಿಶೇಷ ಪ್ರೋತ್ಸಾಹಧನ ನೀಡಲು ಅರ್ಹರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಲು ಹಾಗೂ ಕಲಿಕಾ ಮತ್ತು ಸಾಮಗ್ರಿಗಳನ್ನು ಖರೀದಿಸಲು ಆರ್ಥಿಕ ನೆರವು ನೀಡುವ ದೃಷ್ಟಿಯಿಂದ ಈ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ನ್ಯಾಷನಲ್ ಕೌನ್ಸಿಲ್ ಆಫ್ ಟೀಚರ್ ಎಜುಕೇಷನ್‌ನಿಂದ ಮಾನ್ಯತೆ ಪಡೆದಿರುವ ಸರ್ಕಾರಿ/ಅರೆ ಸರ್ಕಾರಿ/ಅನುದಾನಿತ/ಖಾಸಗಿ ಕಾಲೇಜುಗಳಲ್ಲಿ ಬಿ.ಎಡ್ ಕೋರ್ಸಿಗೆ ದಾಖಲಾತಿ ಹೊಂದಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
ಅರ್ಜಿ ಸಲ್ಲಿಸುವವರು ಕರ್ನಾಟಕ ರಾಜ್ಯಕ್ಕೆ ಸೇರಿದವರಾಗಿದ್ದು, ಹಿಂದಿನ ಸಾಲಿನ ಪರೀಕ್ಷೆಯಲ್ಲಿ ಶೇ.50ರಷ್ಟು ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು. ಪೋಷಕರ ವಾರ್ಷಿಕ ಗರಿಷ್ಟ ವರಮಾನ 6 ಲಕ್ಷ ರೂ.ಗಳಿಗೆ ಮೀರಿರಬಾರದು.
ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯೊಂದಿಗೆ ತಾವು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಪ್ರಾಂಶುಪಾಲರಿಂದ ದೃಢೀಕರಿಸಿದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಹಿಂದಿನ ವರ್ಷದ ಅಂಕಪಟ್ಟಿ, ಶುಲ್ಕ ಪಾವತಿದ ರಸೀದಿ, ಬ್ಯಾಂಕ್ ಖಾತೆಯ ನಕಲು ಪ್ರತಿ, ಆಧಾರ್ ಕಾರ್ಡ್ ನಕಲು ಪ್ರತಿ, ಪಾಸ್‌ಪೋರ್ಟ್ ಅಳತೆಯ 2 ಭಾವಚಿತ್ರವನ್ನು ಲಗತ್ತಿಸಿ ಡಿಸೆಂಬರ್ 25 ರೊಳಗಾಗಿ ಸಲ್ಲಿಸಬಹುದಾಗಿದೆ.
ಅರ್ಜಿಯನ್ನು ಜಾಲತಾಣ https://sevasindhu.karnataka.gok.in ಮೂಲಕ ಸಲ್ಲಿಸಿ, ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಗರದ ಉಪ್ಪಾರಹಳ್ಳಿ ಇಂದಿರಾ ಕಾಲೇಜು ಮುಂಭಾಗ ಮೌಲಾನಾ ಆಜಾದ್ ಭವನದಲ್ಲಿರುವ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಥವಾ ದೂ.ವಾ.ಸಂ. 0816-2273724 ನ್ನು ಸಂಪರ್ಕಿಸಬೇಕೆಂದು ತಿಳಿಸಲಾಗಿದೆ.