Thursday, December 12, 2024
Homeಜಿಲ್ಲೆತುಮಕೂರುಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಬೆವರಿಳಿಸಿದ ಸಚಿವ ಪರಮೇಶ್ವರ್ ಮತ್ತು ಕೆ ಎನ್ ರಾಜಣ್ಣ..!

ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಬೆವರಿಳಿಸಿದ ಸಚಿವ ಪರಮೇಶ್ವರ್ ಮತ್ತು ಕೆ ಎನ್ ರಾಜಣ್ಣ..!

ತುಮಕೂರು | ಮಳೆ ಕೊರತೆ ಹಿನ್ನಲೆಯಲ್ಲಿ, ಕುಡಿಯುವ ನೀರಿನ ಅಭಾವ ಇರುವ ಹಳ್ಳಿಗಳಿಗೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿ, ತಕ್ಷಣವೇ ಟಾಸ್ಕ್ಪೋರ್ಸ್ ಸಭೆ ನಡೆಸಿ, ಶಾಸಕರೊಂದಿಗೆ ಚರ್ಚಿಸಿ, ಕುಡಿಯುವ ನೀರು ಪೂರೈಕೆ ಸಂಬಂಧ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರಾದ ಡಾ: ಜಿ. ಪರಮೇಶ್ವರ್ ಅವರು ಎಲ್ಲಾ ತಾಲ್ಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ 2022-23 ನೇ ಸಾಲಿನ 4ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ್ದು, ಕೊಳವೆ ಬಾವಿ ಕೊರೆಸುವಿಕೆ, ಟ್ಯಾಂಕರ್ ಮೂಲಕ ನೀರು ಪೂರೈಸುವಿಕೆ ಮುಂತಾದ ಅಗತ್ಯ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಸೂಚಿಸಿದರು.

ನಮ್ಮ ಸರ್ಕಾರ ಅಭಿವೃದ್ಧಿಯ ನಿಟ್ಟಿನಲ್ಲಿ ದೂರದೃಷ್ಟಿಯನ್ನು ಇಟ್ಟುಕೊಂಡಿದ್ದು, ಈ  ಹಿನ್ನಲೆಯಲ್ಲಿ ನಿರ್ಲಕ್ಷತೆಗೆ ಅವಕಾಶವಿರುವುದಿಲ್ಲ. ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಸರ್ಕಾರಿ ಕಾರ್ಯಕ್ರಮ ಅನುಷ್ಟಾನ ಮಾಡಬೇಕು. ಸಬೂಬು ಹೇಳುವ ಅಧಿಕಾರಿಗಳ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರಬೇಕು. ಕಚೇರಿಗಳಲ್ಲಿ ಅಧಿಕಾರಿಗಳು ಇರುವಿಕೆ ಮುಖ್ಯ. ಆಡಳಿತ ಚುರುಕುಗೊಳ್ಳಬೇಕು. ಆಡಳಿತ ಪ್ರಾಮಾಣಿಕರವಾಗಿರಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನೊಳಗೊಂಡ ಕರಪತ್ರಗಳನ್ನು ಮುದ್ರಿಸಿ, ರೈತರ ಮನೆ-ಮನೆಗೆ ತೆರಳಿ ಕೃಷಿ ಇಲಾಖೆ ಅಧಿಕಾರಿಗಳು ಪಂಚಾಯತಿವಾರು ಹಂಚುವಂತೆ ಸೂಚಿಸಿದ ಅವರು, ಎಲ್ಲಿಯೂ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳಿಗೆ ಕೃತಕ ಅಭಾವ ಉಂಟಾಗದಂತೆ ಎಚ್ಚರವಹಿಸಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಫಸಲ್ ಬಿಮಾ ಯೋಜನೆ ಕುರಿತಂತೆ ತಾಲ್ಲೂಕುವಾರು ಯೋಜನೆಯ ಫಲಾನುಭವಿ ಮತ್ತು ಕಾರ್ಯಕ್ರಮ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಅಂಕಿ ಅಂಶದ ಮಾಹಿತಿಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ 1533  ಶುದ್ಧನೀರಿನ ಘಟಕಗಳಿದ್ದು, 39 ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ರವೀಶ್ ಅವರು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಯಿಸಿದ ಸಚಿವರು, 15 ದಿನದೊಳಗಾಗಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವರು ಎಲ್ಲಾ ತಾಲ್ಲೂಕುಗಳಿಗೆ ಭೇಟಿ ನೀಡಿ ಶುದ್ಧ ಕುಡಿಯುವ ನೀರಿನ ಘಟಕ ಸುಸ್ಥಿತಿಯಲ್ಲಿರುವಿಕೆ ಮತ್ತು ದುರಸ್ಥಿ ಘಟಕಗಳನ್ನು ಪರಿಶೀಲಿಸಿ ಸಂಬಂಧಿಸಿದ ನಿರ್ವಹಣಾ ಏಜೆನ್ಸಿಗಳನ್ನು ಕರೆಸಿ ಸಭೆ ನಡೆಸುವಂತೆ ಸೂಚಿಸಿದರು.

ಜೆಜೆಎಂ ಯೋಜನೆಯಡಿ ಜಿಲ್ಲೆಗೆ 2205 ಕೋಟಿ ರೂ. ಬಿಡುಗಡೆಯಾಗಿದ್ದು, ಒಟ್ಟು 4 ಹಂತಗಳಲ್ಲಿ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಯೋಜನೆಗಳನ್ನು 1787 ಗ್ರಾಮಗಳಲ್ಲಿ ಕೈಗೊಳ್ಳಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ರವೀಶ್  ಸಭೆಗೆ ಮಾಹಿತಿ ನೀಡಿದಾಗ ಪ್ರತಿಕ್ರಯಿಸಿದ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಅವರು  ತಮ್ಮ ತಾಲ್ಲೂಕಿನ ಕಾಮಗಾರಿ ಪ್ರಕರಣವೊಂದರಲ್ಲಿ 3ನೇ ದರ್ಜೆಯ ಗುತ್ತಿಗೆದಾರರಿಗೆ ಟೆಂಡರ್ ನೀಡಿದ್ದು, ಇದು ಅಕ್ರಮ ಎಂದು ತಿಳಿಸಿದಾಗ, ಮಾತನಾಡಿದ ಸಚಿವ ಡಾ: ಜಿ. ಪರಮೇಶ್ವರ್ ಅವರು ಈ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

ಮಧುಗಿರಿ, ಪಾವಗಡ, ತುಮಕೂರು ನಗರಗಳಲ್ಲಿ ಮೆಟ್ರಿಕ್ ಪೂರ್ವ/ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಗೆ ಹೆಚ್ಚಿನ ಬೇಡಿಕೆ ಇದ್ದು, ಪ್ರವೇಶಾತಿ ಹೆಚ್ಚಿಸುವ ಸಂಬಂಧ  ಪರಿಶೀಲಿಸುವುದಾಗಿ ತಿಳಿಸಿದ ಸಚಿವರು, ನಿರ್ಮಾಣ ಹಂತದಲ್ಲಿರುವ ಹಾಸ್ಟೆಲ್‌ಗಳ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು.

ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಚಿಕ್ಕನಾಯಕನಹಳ್ಳಿ ತಾಲ್ಲೂಕುವೊಂದಕ್ಕೆ 772 ಕೊಳವೆ ಬಾವಿಗಳು ಮಂಜೂರಾಗಿದ್ದು, ಇದು ಸಲ್ಲದು. ಮುಂದಿನ ದಿನಗಳಲ್ಲಿ ಎಲ್ಲಾ ತಾಲ್ಲೂಕುಗಳಿಗೆ ಸರಿಸಮಾನವಾಗಿ ಕೊಳವೆ ಬಾವಿ ಯೋಜನೆಯನ್ನು ವಿಸ್ತರಿಸುವುದಾಗಿ ಸಚಿವರು ತಿಳಿಸಿದರು.

ಅರಣ್ಯ ಇಲಾಖೆಯಲ್ಲಿ 25 ಲಕ್ಷ ಸಸಿಗಳನ್ನು ನೆಡಲಾಗಿದೆ ಎಂಬ ಅಧಿಕಾರಿಗಳ ಮಾಹಿತಿಗೆ ಪ್ರತಿಕ್ರಯಿಸಿದ ಸಚಿವರು, ನಗರದ ಯಾವುದಾದರೂ ಒಂದು ರಸ್ತೆಯಲ್ಲಿ 5 ಕಿ.ಮೀ. ವರೆಗೆ ಗಿಡ ಮರಗಳು ಸಮೃದ್ಧವಾಗಿ ಬೆಳೆಸಿರುವುದನ್ನು ತೋರಿಸಿ.  ಕಳೆದ 10 ವರ್ಷಗಳಲ್ಲಿ ಪೈಲೆಟ್ ಯೋಜನೆಯನ್ನಾಗಿ ಪರಿಗಣಿಸಿ ಜಿಲ್ಲೆಯಲ್ಲಿ ಮರಗಿಡಗಳನ್ನು ಬೆಳೆಸಬೇಕಿತ್ತು. ಈ ಕೆಲಸ ಆಗಿಲ್ಲದ ಕಾರಣ ಇನ್ನು ಮುಂದಿನ ದಿನಗಳಲ್ಲಿ ವ್ಯಾಪಕವಾಗಿ ಸಸಿಗಳನ್ನು ನೆಟ್ಟು ಪೋಷಿಸುವ ಕೆಲಸ ಜಿಲ್ಲೆಯಲ್ಲಿ ಆಗಬೇಕು. ಎಲ್ಲರೂ ಇದಕ್ಕೆ ಸಹರಿಸಬೇಕೆಂದು ಸೂಚಿಸಿದರು.

ತುಮಕೂರು ಜಿಲ್ಲೆಯಾದ್ಯಂತ 6.40 ಲಕ್ಷ ಕುಟುಂಬಗಳಿದ್ದು, ಆದರೆ 7.20 ಲಕ್ಷ ಎಪಿಎಲ್/ಬಿಪಿಎಲ್ ಕಾರ್ಡ್ಗಳನ್ನು ವಿತರಿಸಿರುವುದಾಗಿ ಆಹಾರ ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ ಸಭೆಗೆ ಮಾಹಿತಿ ನೀಡಿದಾಗ, ಮಾತನಾಡಿದ ಸಚಿವರು 2011 ರನ್ವಯ ಕೈಗೊಳ್ಳಲಾದ ಸಮೀಕ್ಷೆಯನ್ವಯ 6.40 ಲಕ್ಷ ಕುಟುಂಬಗಳಿದ್ದು, ಆದರೆ ಕುಟುಂಬಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪಡಿತರ ಚೀಟಿ ವಿತರಿಸಿರುವ ಅಂಕಿ-ಅಂಶ ತಾಳೆಯಾಗದಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಾರ್ಡುಗಳನ್ನು ಮರು ಪರಿಶೀಲಿಸುವಂತೆ ಮತ್ತು ಬಾಕಿ ಇರುವ 7815 ಅರ್ಜಿಗಳನ್ನು ಸರ್ಕಾರದ ಮಾರ್ಗಸೂಚಿಯನ್ವಯ ವಿತರಿಸುವಂತೆ ಸೂಚಿಸಿದರು.

ತುರುವೇಕೆರೆ ಶಾಸಕರಾದ ಎಂ.ಟಿ.ಕೃಷ್ಣಪ್ಪ ಅವರು ಮಾತನಾಡಿ, 1 ಚೀಲ ಕೊಬ್ಬರಿ ಖರೀದಿ ಪ್ರಕ್ರಿಯೆಯಲ್ಲಿ 650 ಗ್ರಾಂ. ಹೆಚ್ಚುವರಿ ಕೊಬ್ಬರಿಯನ್ನು ರೈತರಿಂದ ಪಡೆಯಲಾಗುತ್ತಿದ್ದು, ಇದು ತರವಲ್ಲ ಮತ್ತು ಗ್ರೇಡ್‌ವಾರು ಕೊಬ್ಬರಿಗಳನ್ನು ಪರಿಗಣಿಸಿ, ಗುಣಮಟ್ಟದ ಕೊಬ್ಬರಿಯನ್ನು ತಿರಸ್ಕರಿಸುವುದು ಸರಿಯಲ್ಲ ಎಂದು ಸಭೆಗೆ ತಿಳಿಸಿದಾಗ, ಸಭೆಯಲ್ಲಿ ಉಪಸ್ಥಿತರಿದ್ದ ಸಚಿವರಾದ ಕೆ.ಎನ್. ರಾಜಣ್ಣ ಅವರು ಮಾತನಾಡಿ, ಬರುವ ಸೋಮವಾರ ಬೆಂಗಳೂರಿನಲ್ಲಿ ಈ ಕುರಿತಂತೆ ಚರ್ಚಿಸಲು ಕೃಷಿ ಮಾರುಕಟ್ಟೆ ಅಧಿಕಾರಿಗಳ ಸಭೆ ಕರೆಯುವುದಾಗಿ ಭರವಸೆ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿರಬೇಕು ಮತ್ತು ಯಾವುದೇ ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಸರ್ಕಾರಿ ವೈದ್ಯರುಗಳು ಸೇವೆ ಸಲ್ಲಿಸುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ ಸಚಿವರು, ಮುಂದಿನ ಸಭೆಗೆ ಅಪೂರ್ಣ ಮಾಹಿತಿ ತರುವಂತಹ ಅಧಿಕಾರಿಗಳ ವಿರುದ್ಧ ಸ್ಥಳದಲ್ಲಿಯೇ  ಶಿಸ್ತು ಕ್ರಮ ಕೈಗೊಳ್ಳುವುದಾಗಿ ಸೂಚಿಸಿದರು.

ಸಭೆಯಲ್ಲಿ ಸಂಸದರಾದ ಜಿ. ಎಸ್. ಬಸವರಾಜು, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು, ಸೇರಿದಂತೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments