ತುಮಕೂರು | ಮೈಕ್ರೋ ಫೈನಾನ್ಸ್ (Micro Finance) ಸಿಬ್ಬಂದಿಯಿಂದ ಸಾಲ ಕಟ್ಟುವಂತೆ ಹೆಚ್ಚು ಒತ್ತಡ ಹಾಕಿದ ಹಿನ್ನಲೆಯಲ್ಲಿ ಮನನೊಂದ ಮಹಿಳೆಯೊಬ್ಬರು ವೀಡಿಯೋ ಮಾಡಿಟ್ಟು ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿಯನ್ನು ಸಾಧಿಕ ಬೇಗಂ ಎನ್ನಲಾಗಿದ್ದು, ತಿಪಟೂರಿನ ಗಾಂಧಿ ನಗರದ ಬೋವಿ ಕಾಲೋನಿಯ ವಾಸಿ ಎನ್ನಲಾಗಿದೆ. ಮೈಕ್ರೋ ಫೈನಾನ್ಸ್ನ (Micro Finance) ಸಿಬ್ಬಂದಿಯಿಂದ ಸಾಲ ಕಟ್ಟುವಂತೆ ಹೆಚ್ಚು ಒತ್ತಡ ಹಾಕಿದ್ದರಂತೆ. ಈ ಬಗ್ಗೆ ಹಾಸನದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಪತಿ ಸಯಿದಾ ನಯಾಜ್ ಬಳಿ ಹೇಳಿಕೊಂಡಿದ್ದರಂತೆ. ಪತಿ ಕೂಡ ತನ್ನ ಹೆಂಡತಿಗೆ ಧೈರ್ಯವಾಗಿ ಇರು, ಬಂದು ಸಾಲವನ್ನು ಕಟ್ಟುತ್ತೇನೆ ಅಂತಾ ಹೇಳಿದ್ದರು ಎನ್ನಲಾಗಿದೆ.
ಮೈಕ್ರೋ ಫೈನಾನ್ಸ್ (Micro Finance) ಒತ್ತಡಕ್ಕೆ ನಾಲೆಗೆ ಹಾರಿದ ಮಹಿಳೆ
ಆದರೆ ಕಳೆದ ಸೋಮವಾರ ಮೈಕ್ರೋ ಫೈನಾನ್ಸ್ನ (Micro Finance) ಸಿಬ್ಬಂದಿಯಿಂದ ಹೆಚ್ಚಾದ ಒತ್ತಡ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇವರಲ್ಲಿ ಕ್ಷಮೆಯಾಚಿಸಿ, ಪತಿ ಹಾಗೂ ಮಕ್ಕಳು ಚೆನ್ನಾಗಿ ನೋಡಿಕೊಳ್ಳಿ ಎಂದು ವೀಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ.
ಮನೆಗೆ ಬಂದ ಪತಿ ತನ್ನ ಪತ್ನಿ ಕಾಣದಿದ್ದಕ್ಕೆ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು, ದೂರು ಆದರಿಸಿ ಹುಡುಕಾಟ ನಡೆಸಿದ ಪೊಲೀಸರಿಗೆ ಮಹಿಳೆಯ ಶವ ಪತ್ತೆಯಾಗಿದೆ. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಬಳಿಯ ಕಲ್ಲುಶೆಟ್ಟಿಹಳ್ಳಿ ಬಳಿ ಮಹಿಳೆ ಶವ ಪತ್ತೆಯಾಗಿದ್ದು, ಈ ಸಂಬಂಧ ಕೆ.ಬಿ ಕ್ರಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.