ಕೃಷಿ ಮಾಹಿತಿ | 2023-24 ನೇ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ (PMKSY) ಯೋಜನೆಯಡಿ ಸೂಕ್ಷ್ಮ ಹನಿ ನೀರಾವರಿ ಘಟಕಗಳನ್ನು ಅಡಿಕೆ ಬೆಳೆ ಹೊರತು ಪಡಿಸಿ, ಇತರೆ ತೋಟಗಾರಿಕೆ ಬೆಳೆಗಳಿಗೆ ಅಳವಡಿಸಿಕೊಳ್ಳಲು ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಇದರಿಂದ ರೈತರುಗಳಿಗೆ ನೀರಿನ ಸಮರ್ಪಕ ಬಳಕೆಯೊಂದಿಗೆ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆದು ಅವರ ಆರ್ಥಿಕ ಮಟ್ಟ ಸುಧಾರಿಸಲು ಸಹಕಾರಿಯಾಗಿರುತ್ತದೆ. ಸದರಿ ಯೋಜನೆಯಡಿ ಎಲ್ಲಾ ವರ್ಗದ ರೈತರು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಹನಿ ನೀರಾವರಿ ಅಳವಡಿಕೆಗೆ ಪ್ರತೀ ಫಲಾನುಭವಿಗೆ ಗರಿಷ್ಠ 5.00 ಹೆಕ್ಟೇರ್ ಪ್ರದೇಶದವರೆಗೆ ಹಾಗೂ ತರಕಾರಿ ಮತ್ತು ವಾಣಿಜ್ಯ ಹೂ ಬೆಳೆಗೆ ಗರಿಷ್ಠ 2.00 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನ ನೀಡಲಾಗುತ್ತದೆ. ಭಾರತ ಸರ್ಕಾರದ ಮಾರ್ಗಸೂಚಿಯನ್ವಯ ಮೊದಲ 2.00 ಹೆಕ್ಟೇರ್ ಪ್ರದೇಶದವರೆಗೆ ಇತರೆ ವರ್ಗದ ರೈತರಿಗೆ ಶೇ.75 ಹಾಗೂ ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡ ವರ್ಗದ ರೈತರಿಗೆ (RD ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯ) ಶೇ. 90 ರಷ್ಟು ಮತ್ತು ನಂತರದ 3.00 ಹೆಕ್ಟೇರ್ ಪ್ರದೇಶದವರೆಗೆ ಎಲ್ಲಾ ವರ್ಗದ ರೈತರಿಗೆ ಶೇ.45 ರಷ್ಟು ಸಹಾಯಧನ ನೀಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ರೈತರಿಗೆ ಮಾತ್ರ ಈ ಹಿಂದೆ ಅಳವಡಿಸಿಕೊಂಡಿದ್ದ ಸೂಕ್ಷ್ಮ ನೀರಾವರಿ ಪದ್ದತಿ ಹಾಳಾಗಿದ್ದಲ್ಲಿ / ಘಟಕ ಕಾರ್ಯನಿರ್ವಹಿಸದೇ ಇದ್ದಲ್ಲಿ 7 ವರ್ಷಗಳ ನಂತರ ಅದೇ ಜಮೀನಿಗೆ ಮತ್ತೊಮ್ಮೆ ಸೂಕ್ಷ್ಮ ನೀರಾವರಿ ಪದ್ದತಿ ಅಳವಡಿಸಿಕೊಂಡಲ್ಲಿ ಸಹಾಧನ ನೀಡಲಾಗುತ್ತದೆ.
ವಿಕಲಚೇತನರಿಗೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆ ಮತ್ತು ಅಲ್ಪ ಸಂಖ್ಯಾತರ ಫಲಾನುಭವಿಗಳಿಗೆ ಆದ್ಯತೆ ಮೇರೆಗೆ ಸಹಾಯಧನ ವಿತರಿಸಲಾಗುವುದು. ತೋಟಗಾರಿಕೆ ಇಲಾಖೆಯಿಂದ ಅನುಮೋದನೆಗೊಂಡಿರುವ ಕಂಪನಿಗಳಿಂದ ಮಾತ್ರ ಹನಿ ನೀರಾವರಿ ಘಟಕಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
ಈ ಯೋಜನೆಯಡಿಯಲ್ಲಿ ಆಸಕ್ತ ರೈತ ಫಲಾನುಭವಿಗಳು ಹತ್ತಿರದ ಗ್ರಾಮ ಪಂಚಾಯಿತಿ/ ಆಯಾ ತಾಲ್ಲೂಕು ತೋಟಗಾರಿಕೆ ಕಛೇರಿಯಲ್ಲಿ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ತುಮಕೂರು- ದೂ.ವಾ.ಸಂ. 0816-2279705, ಗುಬ್ಬಿ-08131-222659, ಕುಣಿಗಲ್-08132-221981, ತಿಪಟೂರು-08134-251424, ಚಿ.ನಾ.ಹಳ್ಳಿ- 08133-267457, ತುರುವೇಕೆರೆ-08139-288350, ಶಿರಾ-08135-295530, ಕೊರಟಗೆರೆ-08138-232920,, ಮಧುಗಿರಿ-08137-282417, ಪಾವಗಡ-08136-244064ನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಪ್ರಕಟಣೆ ತಿಳಿಸಿದೆ.