ತುಮಕೂರು | ಮಧುಗಿರಿ ತಾಲ್ಲೂಕಿನಲ್ಲಿ ಸುಮಾರು 6 ತಿಂಗಳುಗಳಿಂದ ಮೊದಲೇ ಎರಡು ಹಾಲಿನ ಟ್ಯಾಂಕರ್ ಗಳಲ್ಲಿ ನೀರು, ಉಪ್ಪು, ಸಕ್ಕರೆ ಬೆರೆಸಿ ಅವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದದ್ದು ಅವ್ಯವಹಾರದಲ್ಲಿ ಭಾಗಿಯಾಗಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈ ಗೊಳ್ಳಬೇಕೆಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು ಒತ್ತಾಯಿಸಿದರು.
ಪಟ್ಟಣದ ಎಂ.ಎನ್.ಕೆ. ಸಮುದಾಯ ಭವನದಲ್ಲಿ ಶುಕ್ರವಾರ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ 17 ರಂದು ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಹಾಲು ಸಂಗ್ರಹಿಸಲು ಬರುತ್ತಿದ್ದ ಟ್ಯಾಂಕರ್ ನ ಚಾಲಕ ಹಾಗೂ ಸಹಾಯಕರು ಸೇರಿಕೊಂಡು ಪ್ರತಿ ದಿನ ಖಾಲಿ ಟ್ಯಾಂಕರ್ ಗೆ 2500 ಲೀಟರ್ ನೀರಿಗೆ ಉಪ್ಪು ಸಕ್ಕರೆಯನ್ನು ಮಿಶ್ರಣ ಮಾಡಿ ತುಂಬಿಸಿ ನಂತರ ಸಂಘಗಳಿಂದ ಹಾಲು ಸಂಗ್ರಹಿಸಿ ಆ ಹಾಲನ್ನು ಹಾಲು ಒಕ್ಕೂಟಕ್ಕೆ ಕಳುಹಿಸಿ ಅಲ್ಲಿ ಹಾಲಿನ ಗುಣ ಮಟ್ಟ ಸರಿಯಿಲ್ಲವೆಂದು ಹಾಲು ಉತ್ಪಾದಕರಿಗೆ ನೀಡಲಾಗುತ್ತಿದ್ದ 5 ರೂ. ಪ್ರೋತ್ಸಾಹ ಧನ ಹಾಗೂ ಸಂಘಗಳಿಗೆ ನೀಡುತ್ತಿದ್ದ 1 ರೂ. ಹಣ ವನ್ನು ಕಡಿತ ಗೊಳಿಸಲಾಗುತ್ತಿದೆ.
ಇದರಿಂದ ಕಳೆದ 6 ತಿಂಗಳಿನಿಂದ ಹೈನುಗಾರರಿಗೆ ಸುಮಾರು 1.5 ಕೋಟಿ ರೂಗಳ ಅಧಿಕ ಹಣ ನಷ್ಟವಾಗಿದೆ. ಹಾಲು ಸಂಗ್ರಹಣೆಗಾಗಿ ಟೆಂಡರ್ ಮೂಲಕ ಎರಡು ಟ್ಯಾಂಕರ್ ಗಳನ್ನು (ಕೆ.ಎ – 51 -ಎ ಹೆಚ್ -3341- ಕೆ.ಎ- 51 ಎ ಹೆಚ್-2580) ಒಕ್ಕೂಟಕ್ಕೆ ಪಡೆಯಲಾಗಿದ್ದು. ಒಂದೆ ನಂಬರಿನ ಟ್ಯಾಂಕರ್ ನಲ್ಲಿ ಮಿಡಿಗೇಶಿ ಹೋಬಳಿಯ ಇತರೆ ಗ್ರಾಮಗಳಲ್ಲಿ 2500 ಲೀಟರ್ ಹಾಲು ಸಂಗ್ರಹಿಸಿ ಅದನ್ನು ಖಾಸಗಿ ಡೇರಿಗಳಿಗೆ ನೀಡಿ ಹಣ ದೋಚುತ್ತಿದ್ದರು.
ಒಕ್ಕೂಟದ ಕೆಲ ನಿಷ್ಟಾವಂತ ಅಧಿಕಾರಿಗಳಿಗೆ ವಿಷಯ ತಿಳಿದು ಟ್ಯಾಂಕರ್ ಗಳನ್ನು ಹಿಂಬಾಲಿಸಿದಾಗ ಚಾಲಕ ಮತ್ತು ಸಹಾಯಕ ರಸ್ತೆ ಮದ್ಯದಲ್ಲೇ ಟ್ಯಾಂಕರ್ ನಿಲ್ಲಿಸಿ ಪರಾರಿಯಾಗಿದ್ದಾರೆ. ಎರಡು ಹಾಲಿನ ವಾಹನಗಳನ್ನು ವಶ ಪಡಿಸಿಕೊಂಡಿರುವ ಅಧಿಕಾರಿಗಳು ಸೂಕ್ತ ತನಿಖೆ ನಡೆಸ ಬೇಕು ಹಾಗೂ ರೈತರಿಗೆ ಆಗಿರುವ ನಷ್ಟ ದ ಹಣವನ್ನು ವಾಪಸ್ ವಿತರಣೆ ಮಾಡಲು ಕ್ರಮಕೈಗೊಂಡು ಘಟನೆಯಲ್ಲಿ ಯಾರು ಶಾಮೀಲು ಆಗಿದ್ದಾರೆ ಎಂದು ಪತ್ತೆ ಹಚ್ಚಬೇಕಾಗಿದೆ.
ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಕೆಲ ಡೇರಿಯ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದ್ದಾರೆಂದು ಆರೋಪಿಸಿ ಆ ಹಾಲು ಉತ್ಪಾದಕರ ಸಂಘಗಳಲ್ಲಿ ಶೇಖರಣೆಯಾಗುತ್ತಿರುವ ಹಾಲು ಗುಣಮಟ್ಟದಲ್ಲಿ ಕೂಡಿಲ್ಲ ಎಂದು ಹಾಲು ಶೇಖರಣೆ ಮಾಡಲು ನಿರಾಕರಿಸಲಾಗುತ್ತಿದೆ ಜೆಡಿಎಸ್ ಪಕ್ಷಕ್ಕೆ ಬೆಂಬಲಿಸಿದ ಕೆಲ ಹಾಲು ಉತ್ಪಾದಕ ಸಂಘಗಳ ಸದಸ್ಯರ ಹಾಲನ್ನು ಯಾವುದೇ ಪರೀಕ್ಷೆ ನಡೆಸದೆ ಹಾಲು ಸಂಗ್ರಹಣೆ ಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಎದುರಾಗಿವೆ.
ರೈತರಿಗೆ ಆಗುತ್ತಿರುವ ಅನ್ಯಾಯ ಮತ್ತು ಮೋಸದ ಬಗ್ಗೆ ಇಲ್ಲಿನ ನಿರ್ದೇಶಕರಿಗೆ ತಿಳಿದಿಲ್ಲವೆ. ಇದೇ ರೀತಿಯ ಅವ್ಯವಹಾರ ಈ ಹಿಂದೆ ಮಂಡ್ಯದ ಮನ್ ಮುಲ್ ನಲ್ಲಿ ನಡೆದ್ದಿದ್ದು ಆ ಭಾಗದ ರೈತಾಪಿ ವರ್ಗ ಪ್ರತಿಭಟನೆ ನಡೆಸಿ ತಮಗಾದ ಮೋಸದ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದರು
ವಿಶೇಷವೆನೆಂದರೆ ಮಧುಗಿರಿಯ ಪ್ರಕರಣದಲ್ಲಿರುವ ಎರಡ ಟ್ಯಾಂಕರ್ ಗಳ ಟೆಂಡರ್ ಕೂಗಿರುವುದು ಮಂಡ್ಯದ ಮೂಲದವರೆಂದು ನಾಗೇಶ್ ಬಾಬು ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಆದಿನಾರಾಯಣ್ ರೆಡ್ಡಿ, ಗೋಪಾಲಯ್ಯ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಕೆಂಚಣ್ಣ ಮುಂತಾದವರು ಇದ್ದರು.