ತುಮಕೂರು | ಸರ್ಕಾರಿ ಅಧಿಕಾರಿಗಳು ತಮ್ಮ ಆದಾಯ ಮೀರಿ ಅಧಿಕ ಆಸ್ತಿ ಗಳಿಸಿದ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಅವರ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿದ್ದು, ಆದಾಯದ ಮೂಲ ಆಸ್ತಿ ಪತ್ರಗಳು, ಬ್ಯಾಂಕ್ ವಿವರಗಳ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ತುಮಕೂರಿನ ಕೆಐಎಡಿಬಿ ಅಧಿಕಾರಿ ನರಸಿಂಹಮೂರ್ತಿ, ಹಾವೇರಿಯ ನಿರ್ಮಿತಿ ಕೇಂದ್ರದ ಇಂಜಿನಿಯರ್ ವಾಗೀಶ್ ಶೆಟ್ಟರ್, ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಬೆಸ್ಕಾಂ ಟೆಕ್ನಿಕಲ್ ಡೈರೆಕ್ಟರ್ ರಮೇಶ್, ಮೈಸೂರು ಮಹಾನಗರ ಪಾಲಿಕೆ ಅಧಿಕಾರಿ ಮಹೇಶ್ ಕುಮಾರ್, ಬೀದರ್ ಭೂ ಸೇನಾ ನಿಗಮದ ಅಧಿಕಾರಿ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ತುಮಕೂರಿನ ಆರ್ ಟಿ ನಗರದಲ್ಲಿರುವ ಕೆ ಐ ಎ ಡಿ ಬಿ ಅಧಿಕಾರಿ ನರಸಿಂಹಮೂರ್ತಿ ಅವರ ಮನೆ ಮೇಲೆ ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದಾರೆ. ಅಧಿಕಾರಿಗಳು ಕಾಗದಪತ್ರಗಳು ಹಾಗೂ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಮನೆಯಲ್ಲಿರುವ ಚಿನ್ನಾಭರಣಗಳು ಹಾಗೂ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆದು ಅವುಗಳ ತೂಕ ಪರಿಶೀಲನೆ ಮಾಡಿದ್ದಾರೆ.
ಬೆಳಿಗ್ಗೆ ಸುಮಾರು ಐದು ವಾಹನಗಳಲ್ಲಿ ಧಿಡೀರ್ ಆಗಮಿಸಿದ ಲೋಕಾಯುಕ್ತ ಡಿಎಸ್ಪಿಗಳಾದ ಮಂಜುನಾಥ್ ಮತ್ತು ಹರೀಶ್ ನೇತೃತ್ವದ ತಂಡ ಸಂಪೂರ್ಣ ದಾಖಲೆಗಳ ಪರಿಶೀಲನೆ ಮಾಡುತ್ತಿದೆ. ಇದೀಗ ಸ್ಥಳಕ್ಕೆ ಲೋಕಾಯುಕ್ತ ಎಸ್ ಪಿ ವಲಿಂ ಪಾಷ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಕೂಡ ಮಾಹಿತಿ ನೀಡಿದ್ದಾರೆ.