ಚಿತ್ರದುರ್ಗ | ಪ್ರಜಾಪ್ರಭುತ್ವದ ಹಬ್ಬವನ್ನು (A festival of democracy) ಸಂಭ್ರಮಿಸಲು ಸಿದ್ಧತೆಗಳು ಸಾಗಿದ್ದು, ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಮತದಾರರನ್ನು (Voter) ಆಕರ್ಷಿಸಲು ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತದಾರರನ್ನು ಆಕರ್ಷಿಸಲು 54 ವಿಶೇಷ ಮತಗಟ್ಟೆಗಳನ್ನು (Special polling station) ಸ್ಥಾಪಿಸಲಾಗಿದೆ.
ಮಹಿಳಾ ಮತದಾರರನ್ನು ಉತ್ತೇಜಿಸಲು ಪ್ರತಿ ವಿಧಾನಸಭಾವಾರು ಮಹಿಳಾ ಮತದಾರರು ಹೆಚ್ಚಿರುವ 5 ಕಡೆ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಮಹಿಳಾ ಅಧಿಕಾರಿ ಹಾಗೂ ಸಿಬ್ಬಂದಿ ಚುನಾವಣಾ ಕಾರ್ಯ ನಿರ್ವಹಿಸಲಿದ್ದಾರೆ.
ಇದೇ ಮಾದರಿಯಲ್ಲಿ ಪ್ರತಿ ವಿಧಾನ ಸಭಾವಾರು 6 ವಿಶೇಷ ಚೇತನ, ಯುವ, ವಿಷಯಾಧಾರಿತ ಹಾಗೂ ಸ್ಥಳೀಯ ಇತಿಹಾಸ ಪರಂಪರೆ, ಸಂಸ್ಕೃತಿ ಬಿಂಬಿಸುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಮತಗಟ್ಟೆಗಳಲ್ಲಿ ತೆಂಗಿನ ಚಪ್ಪರ ಹಾಗೂ ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ.
ಮತದಾರರು ಮತದಾನ ಕೇಂದ್ರಕ್ಕೆ ಮತದಾನ ಮಾಡಲು ಆಗಮಿಸಿದಾಗ ಮತಗಟ್ಟೆ ಕೇಂದ್ರದಲ್ಲಿ ಮೂರು ಜನ ಮತಗಟ್ಟೆ ಅಧಿಕಾರಿಗಳಿದ್ದು, ಮತಗಟ್ಟೆ ಅಧಿಕಾರಿ 1 ಅವರ ಬಳಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಮತ್ತು ಮತದಾರರ ಗುರುತಿನ ಚೀಟಿಯನ್ನು ಪರಿಶೀಲಿಸಲಾಗುತ್ತದೆ. ನಂತರದಲ್ಲಿನ ಅಧಿಕಾರಿಗಳು ಕ್ರಮವಾಗಿ ಮತದಾರನ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿಯ ಗುರುತನ್ನು ಹಾಕಿ, ಮತದಾನದ ಚೀಟಿ ನೀಡಿ ಸಹಿ ಪಡೆದುಕೊಳ್ಳಲಾಗುತ್ತದೆ.
ಪ್ರತಿ ಮತಗಟ್ಟೆಗಳಲ್ಲಿ ಓರ್ವ ಮತಗಟ್ಟೆ ಅಧಿಕಾರಿ ಇಬ್ಬರು ಸಹಾಯಕ ಮತಗಟ್ಟೆ ಅಧಿಕಾರಿ ಹಾಗೂ ಓರ್ವ ಮತದಾನ ಅಧಿಕಾರಿ ಕಾರ್ಯನಿರ್ವಹಿಸಲಿದ್ದಾರೆ. ಮತ ಚಲಾಯಿಸಲು ಆಗಮಿಸುವ ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಮತ ಚಲಾಯಿಸಬಹುದು.