ತುಮಕೂರು | ನ್ಯಾಯ ಕೊಡಿಸಿ ಎಂದು ನ್ಯಾಯಾಧೀಶರು, ಎಸ್.ಪಿ, ಡಿಸಿಗೆ ಪತ್ರ ಬರೆದಿಟ್ಟು ಕೆ ಎಸ್ ಆರ್ ಟಿ ಸಿ ಬಸ್ ಚಾಲಕ (KSRTC bus driver) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ.
ನಾರಾಯಣ್. ಆರ್. ಅವರೇ ಆತ್ಮಹತ್ಯೆಗೆ ಯತ್ನಿಸಿದ ಸಾರಿಗೆ ಇಲಾಖೆ ಬಸ್ ಚಾಲಕ. ತನ್ನ ಮನೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದು, ವಿಷ ಕುಡಿದಿರುವ ಬಗ್ಗೆ ಮಾಹಿತಿ ಗೊತ್ತಾದ ಕೂಡಲೇ ಕುಟುಂಬಸ್ಥರೇ ಕುಣಿಗಲ್ ನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸೂಕ್ತ ಚಿಕಿತ್ಸೆ ಕೊಡಿಸಿದ ಕಾರಣ ಚೇತರಿಸಿಕೊಳ್ಳುತ್ತಿದ್ದಾರೆ.
ತುಮಕೂರು – ಮೈಸೂರು ಮಾರ್ಗದ ಕೆ ಎಸ್ ಆರ್ ಟಿ ಸಿ ಬಸ್ ಚಾಲಕ ನಾರಾಯಣ್. ಕಳೆದ ಡಿ. 10 ರಂದು ಚಾಲಕ ನಾರಾಯಣ್ ಮೇಲೆ ಹಲ್ಲೆ ನಡೆದಿತ್ತು. ಕಾನೂನು ಪದವಿ ಓದುತ್ತಿರುವ ಇಬ್ಬರು ವಿದ್ಯಾರ್ಥಿಗಳು ಚಾಲಕನ ಮೇಲೆ ಹಲ್ಲೆ ಮಾಡಿದ್ದರು. ತುಮಕೂರಿನ ಎಸ್ಎಸ್ಐಟಿ ಕಾಲೇಜು ಎದುರು ಚಾಲಕನ ಮೇಲೆ ಹಲ್ಲೆ ಮಾಡಲಾಗಿತ್ತು. ಹಲ್ಲೆ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದರೆಂದು ಆರೋಪಿಸಿ ನಾರಾಯಣ್ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ತಪ್ಪಿತಸ್ಥರಿಗೆ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಿನ್ನೆ ಇಡೀ ದಿನ ನಾರಾಯಣನನ್ನು ಪೊಲೀಸ್ ಠಾಣೆಯಲ್ಲೇ ಕಾಯಿಸಿ ಕಳುಹಿಸಿದ್ದರು ಎಂದು ದೂರಿದ್ದಾರೆ. ಹಲ್ಲೆ ನಡೆಸಿದವರನ್ನ ಕರೆಸಿ ವಿಚಾರಣೆ ಮಾಡದೆ, ನಾರಾಯಣ್ ಗೆ ಧಮ್ಕಿ ಹಾಕಿ ಕಳುಹಿಸಿದ್ರಂತೆ ಪೊಲೀಸರು.
ಇದರಿಂದ ಮನನೊಂದು ಮನೆಗೆ ತೆರಳಿದ ನಾರಾಯಣ್ ಇಂದು ಮುಂಜಾನೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದೀಗ, ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಈ ಮಧ್ಯೆ, ಚಾಲಕನ ವಿರುದ್ಧವೂ ಕಾನೂನು ಪದವಿ ಓದುತ್ತಿರುವ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಜಯನಗರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿ ದೂರು ದಾಖಲಾಗಿದೆ.