ಬೆಂಗಳೂರು | ಏಪ್ರಿಲ್-ಸೆಪ್ಟೆಂಬರ್ 2024 ರ ಅವಧಿಯಲ್ಲಿ ವಿದೇಶಿ ನೇರ ಹೂಡಿಕೆಯ (ಎಫ್‌ಡಿಐ) ಒಳಹರಿವಿನಲ್ಲಿ ಕರ್ನಾಟಕವು (Karnataka) ಭಾರತದಲ್ಲಿಯೇ ಎರಡನೇ ಸ್ಥಾನದಲ್ಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ. ಕರ್ನಾಟಕ ಸರ್ಕಾರದ ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (ಡಿಪಿಐಐಟಿ) ಪ್ರಕಾರ, ಈ ಅವಧಿಯಲ್ಲಿ ರಾಜ್ಯವು $ 3.54 ಬಿಲಿಯನ್ ಅಥವಾ ₹29,597 ಕೋಟಿ ಎಫ್‌ಡಿಐ ಅನ್ನು ಆಕರ್ಷಣೆ ಮಾಡಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ X ನಲ್ಲಿ ಬರೆದುಕೊಂಡಿರುವ, ಆರ್ಥಿಕ ಬೆಳವಣಿಗೆಯಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ, ಏಪ್ರಿಲ್-ಸೆಪ್ಟೆಂಬರ್ 2024 ರ ಅವಧಿಯಲ್ಲಿ $3.54 ಶತಕೋಟಿಯೊಂದಿಗೆ FDI ಒಳಹರಿವಿನಲ್ಲಿ ಭಾರತದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಮಹಾರಾಷ್ಟ್ರವು 13.55 ಶತಕೋಟಿ ಡಾಲರ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ತೆಲಂಗಾಣ $ 1.54 ಶತಕೋಟಿಯೊಂದಿಗೆ ಮೂರನೇ ಸ್ಥಾನದಲ್ಲಿದೆ. ಈ ಸಾಧನೆಯು ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದ ಕಾರ್ಯತಂತ್ರದ ಮತ್ತು ಹೂಡಿಕೆದಾರ-ಸ್ನೇಹಿ ನೀತಿಗಳನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಐಟಿ, ಸೇವೆಗಳು ಮತ್ತು ಟೆಲಿಕಾಂನಂತಹ ಪ್ರಮುಖ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಆಕರ್ಷಣೆಯು ಜಾಗತಿಕ ಹೂಡಿಕೆಯ ಕೇಂದ್ರವಾಗಿ ಅದರ ಸ್ಥಾನವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.
ಅಕ್ಟೋಬರ್ 2019 ಮತ್ತು ಸೆಪ್ಟೆಂಬರ್ 2024 ರ ನಡುವೆ, ಕರ್ನಾಟಕವು ದೇಶದ ಎಲ್ಲಾ ಎಫ್‌ಡಿಐ ಇಕ್ವಿಟಿ ಒಳಹರಿವಿನ 20.79 ಶೇಕಡಾ ಪಾಲನ್ನು ಹೊಂದಿದ್ದು, 31.48 ಶೇಕಡಾ ಪಾಲನ್ನು ಹೊಂದಿರುವ ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿದೆ ಎಂದು DPIIT ಡೇಟಾ ತೋರಿಸುತ್ತದೆ. 16.44 ರಷ್ಟು ಪಾಲು ಹೊಂದಿರುವ ಗುಜರಾತ್ ಮೂರನೇ ಸ್ಥಾನದಲ್ಲಿದೆ.
ಈ ಅವಧಿಯಲ್ಲಿ, ಕರ್ನಾಟಕವು ₹4,19,080 ಕೋಟಿ ಅಥವಾ $54 ಶತಕೋಟಿ ಎಫ್‌ಡಿಐ ಇಕ್ವಿಟಿ ಒಳಹರಿವನ್ನು ದಾಖಲಿಸಿದೆ. DPIIT ಪ್ರಕಾರ, ಏಪ್ರಿಲ್ 2000 ಮತ್ತು ಸೆಪ್ಟೆಂಬರ್ 2024 ರ ನಡುವೆ ದೇಶದಲ್ಲಿ ಈಕ್ವಿಟಿ ಒಳಹರಿವು ಸೇರಿದಂತೆ ಸಂಚಿತ ಎಫ್‌ಡಿಐ ಒಳಹರಿವು $1.03 ಟ್ರಿಲಿಯನ್‌ಗಿಂತಲೂ ಹೆಚ್ಚಿದೆ.
ಏಪ್ರಿಲ್-ಸೆಪ್ಟೆಂಬರ್ 2024 ರ ಅವಧಿಯಲ್ಲಿ ಒಟ್ಟಾರೆ ಎಫ್‌ಡಿಐ ಈಕ್ವಿಟಿ ಒಳಹರಿವು $29 ಶತಕೋಟಿ ಅಥವಾ ₹2,49,032 ಕೋಟಿಗಳಷ್ಟಿತ್ತು ಮತ್ತು ಹಿಂದಿನ ವರ್ಷಕ್ಕಿಂತ 45 ಶೇಕಡಾ ಬೆಳವಣಿಗೆಯಾಗಿದೆ. ಎಫ್‌ಡಿಐ ಈಕ್ವಿಟಿ ಒಳಹರಿವಿನಿಂದ ಅಗ್ರ ಹೂಡಿಕೆ ಮಾಡುವ ದೇಶಗಳಲ್ಲಿ ಮಾರಿಷಸ್ 25 ಪ್ರತಿಶತ ಪಾಲನ್ನು ಹೊಂದಿದ್ದು, ಸಿಂಗಾಪುರ್ ಶೇಕಡಾ 24 ಮತ್ತು ಯುಎಸ್ ಶೇಕಡಾ 10 ರಷ್ಟು ಹೊಂದಿದೆ ಎಂದು ಹೇಳಿದ್ದಾರೆ.