ತುಮಕೂರು | ನಾನು ವಿಘ್ನೇಶ್ವರ (Vigneshwar) ಇದ್ದ ಹಾಗೆ ಸೋಮಣ್ಣ (Somanna) ಸುಬ್ರಹ್ಮಣ್ಯ (Subrahmanya) ಇದ್ದ ಹಾಗೆ ಅವರು ಎಲ್ಲಾ ಕಡೆ ಸುತ್ತಾಡಿ ಬರುತ್ತಾರೆ. ನಾನು ಇದ್ದಲ್ಲಿಯೇ ಇರುತ್ತೇನೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ ತುಮಕೂರು ಲೋಕಸಭಾ (Tumkur Lok Sabha) ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಜೆ ಸಿ ಮಾಧುಸ್ವಾಮಿ (JC Madhuswamy).
ತುಮಕೂರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊರಗಿನವರು ಇಲ್ಲಿ ಬಂದು ಗೆದ್ದ ಉದಾಹರಣೆ ಇಲ್ಲ. ಕಳೆದ ಬಾರಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಸ್ಪರ್ಧೆ ಮಾಡುವ ಮುನ್ನವೇ ಹೇಳಿದ್ದೆ, ಹೊರಗಿನಿಂದ ಹಲವಾರು ನಾಯಕರು ಸ್ಪರ್ಧೆ ಮಾಡುವ ಬಗ್ಗೆ ನಾನು ವಿರೋಧ ವ್ಯಕ್ತಪಡಿಸಿದ್ದೆ ಎಂದು ಹೇಳಿದ್ದಾರೆ.
ಹೊರಗಿನವರು ಬರುತ್ತಾರೆ ಇಲ್ಲಿ ಗೆದ್ದು, ಸೋತು ಹೋಗುತ್ತಾರೆ. ಆದರೆ ಇಲ್ಲಿರುವಂತಹ ನಾಯಕರು ಕಾರ್ಯಕರ್ತರ ಗತಿ ಏನು..? ಇದರ ಬಗ್ಗೆಯೂ ಆಲೋಚನೆ ಮಾಡಬೇಕಾಗುತ್ತದೆ. ಹೀಗಾಗಿ ಸ್ಥಳೀಯ ನಾಯಕರಿಗೆ ಅವಕಾಶ ನೀಡಿದರೆ ಪಕ್ಷ ಕೂಡ ಬಲಗೊಳ್ಳುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಬಾಬು ಅವರ ಸಹಕಾರದ ಬಗ್ಗೆ ಮಾತನಾಡಿದ ಅವರು, ಸುರೇಶ್ ಬಾಬು ಅವರು ಹಲವು ಕಡೆ ಹೇಳಿದ್ದಾರೆ. ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ ಅವರು ಸಪೋರ್ಟ್ ಮಾಡಿ ಅಂದರೆ ಮಾಡುತ್ತೇವೆ ಎಂದು, ಹೀಗಾಗಿ ಅವರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ನಮಗೆ ಸಪೋರ್ಟ್ ನೀಡುತ್ತಾರೆ ಆದರೆ ಮೈತ್ರಿಯ ವಿಚಾರದಲ್ಲಿ ಎಷ್ಟರ ಮಟ್ಟಿಗೆ ಮತದಾರರು ಪಕ್ಷದ ಕಾರ್ಯಕರ್ತರು ಮತ ನೀಡುತ್ತಾರೆ ಎನ್ನುವುದು ಮುಖ್ಯ ಎನ್ನುವುದನ್ನ ಮಾಧುಸ್ವಾಮಿ ಹೇಳಿದ್ದಾರೆ.
ಒಟ್ಟಾರೆಯಾಗಿ ಹೊರಗಿನ ಅಭ್ಯರ್ಥಿಯನ್ನು ಹೊರತುಪಡಿಸಿ ಸ್ಥಳೀಯ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ನೀಡಬೇಕು ಎಂದು ನಮ್ಮ ಜೊತೆ ಬಿಎಸ್ ಯಡಿಯೂರಪ್ಪನವರು ಇದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆ ಎಲ್ಲಾ ಪಕ್ಷದವರಿಗೂ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.