ಬೆಂಗಳೂರು | ಕಳೆದ ವಿಧಾನಸಭೆ ಚುನಾವಣೆಯ ವೇಳೆ ಕೆ ಆರ್ ಪಿ ಪಿ ಎಂಬ ಹೊಸ ಪಕ್ಷವನ್ನು ಸ್ಥಾಪನೆ ಮಾಡಿ, ಪಕ್ಷದಿಂದ ಅಭ್ಯರ್ಥಿಗಳನ್ನು ಕೂಡ ಕಣಕ್ಕಿಳಿಸಿ ಚುನಾವಣೆಯನ್ನು ಎದುರಿಸಿದ್ದ ಜನಾರ್ದನ ರೆಡ್ಡಿ ಇದೀಗ ಬಿಜೆಪಿ ಸೇರ್ಪಡೆಯ ಬಗ್ಗೆ ಸುಳಿವು ನೀಡಿದ್ದಾರೆ.
ಬಿಜೆಪಿಯ ಪ್ರಬಲ ನಾಯಕ ಎಂದು ಗುರುತಿಸಿಕೊಂಡಿದ್ದ ಜನಾರ್ದನ್ ರೆಡ್ಡಿ ಕೆಲವು ನಾಯಕರ ನಡೆಯಿಂದ ಬೇಸರಗೊಂಡು ಕಳೆದ ವಿಧಾನಸಭೆ ಚುನಾವಣೆಯ ವೇಳೆ ತಮ್ಮದೇ ಆದಂತಹ ಪಕ್ಷವನ್ನು ಸ್ಥಾಪನೆ ಮಾಡಿ ಗೆದ್ದು ಶಾಸಕರು ಕೂಡ ಆಗಿದ್ದರು. ಇದೀಗ ಮರಳಿ ಮಾತೃ ಪಕ್ಷ ಬಿಜೆಪಿಗೆ ಸೇರ್ಪಡೆಯಾಗುವ ಸೂಚನೆ ಕೇಳಿಬರುತ್ತದೆ.
ಬಿಜೆಪಿಯ ಹಿರಿಯ ನಾಯಕ ಶ್ರೀರಾಮುಲು ಜನಾರ್ದನ ರೆಡ್ಡಿಯನ್ನು ಪಕ್ಷಕ್ಕೆ ಕರೆ ತರಲು ಪಕ್ಷದ ಹೈಕಮಾಂಡ್ ನಾಯಕರನ್ನು ಕಳೆದ ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ಭೇಟಿ ಮಾಡಿ ಮಾತುಕತೆಯನ್ನು ನಡೆಸಿದ್ದರು ಇದೀಗ ಆ ಮಾತುಕತೆ ಯಶಸ್ವಿಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ನಾಳೆ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗುವುದಕ್ಕೆ ಇಂದು ತಮ್ಮ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಕರೆಸಿ ಬೆಂಗಳೂರಿನಲ್ಲಿ ಮಾತುಕತೆಯನ್ನು ನಡೆಸಿದ್ದಾರೆ ಕೆ ಆರ್ ಪಿ ಪಿ ಸಂಸ್ಥಾಪಕ ಮತ್ತು ಶಾಸಕ ಜನಾರ್ದನ್ ರೆಡ್ಡಿ. ಅಂದುಕೊಂಡಂತೆ ಆದರೆ ನಾಳೆ ಅಧಿಕೃತವಾಗಿ ತಮ್ಮ ಪಕ್ಷವನ್ನು ಬಿಜೆಪಿ ಪಕ್ಷದೊಂದಿಗೆ ವಿಲೀನ ಮಾಡಿ ಪಕ್ಷಕ್ಕೆ ಸೇರಿಕೊಳ್ಳುವ ಸಾಧ್ಯತೆಗಳಿವೆ.