ಬೆಂಗಳೂರು | ಹತ್ತು ಸಾವಿರ ವರ್ಷಗಳ ಹಳೆಯದಾದ ಶಿವನ ತ್ರಿಶೂಲ ಮತ್ತು 3 ಸಾವಿರ ವರ್ಷಗಳ ಪುರಾತನ ಇಂಧ್ರನ ವಜ್ರಾ [ವಜ್ರಾಯುಧ] ಪತ್ತೆಯಾಗಿದೆ. ಫಿಲಿಫೈನ್ಸ್ ದೇಶದಲ್ಲಿ 2015 ರಲ್ಲಿ ಗಣಿಗಾರಿಕೆ ಮಾಡುವಾಗ ಭೂ ಗರ್ಭದಲ್ಲಿ ಐತಿಹಾಸಿಕ, ಸಾಂಸ್ಕತಿಕ ಮತ್ತು ಕಲಾತ್ಮಕ ಮೌಲ್ಯವುಳ್ಳ ಅತ್ಯಂತ ಅಪರೂಪದ, ಅಮೂಲ್ಯ ಮತ್ತು ಭಾರತೀಯ ಪರಂಪರೆಯ ಈ ವಸ್ತುಗಳು ಗಣಿ ಉದ್ಯಮಿ, ಸಂಶೋಧಕ ಸಯ್ಯದ್ ಸಮೀರ್ ಹುಸೇನ್ ಅವರಿಗೆ ದೊರೆತಿದ್ದು, ಇವು ದೈವಿಕ ಸ್ವರೂಪದ ಮೌಲ್ಯಗಳನ್ನು ಒಳಗೊಂಡಿವೆ.
ಇದೇ ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಮೂರುವರೆ ಅಡಿ ಎತ್ತರದ ತ್ರಿಶೂಲ ಮತ್ತು ಒಂದೂವರೆ ಅಡಿ ಉದ್ದದ ಇಂಧ್ರನ ವಜ್ರಾ [ವಜ್ರಾಯುಧ]ಗಳನ್ನು ಸಾರ್ವಜನಿಕರಿಗೆ ಸಯ್ಯದ್ ಸಮೀರ್ ಹುಸೇನ್ ಅನಾವರಣಗೊಳಿಸಿದರು. ವಜ್ರಾಯುಧ ಜಗತ್ತಿನ ಅತ್ಯಂತ ಶಕ್ತಿಶಾಲಿ ಅಸ್ತ್ರ. ಇದನ್ನು ಇಂಧ್ರ ಬಳಸುತ್ತಿದ್ದು, ತ್ರಿಶೂಲ ಶಿವನಿಗೆ ಪ್ರಿಯವಾದ ವಸ್ತು. ಇವುಗಳ ಬಗ್ಗೆ 20 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ದೈವಿಕ ವಸ್ತುಗಳ ಬಗ್ಗೆ ವ್ಯಾಪಕ ಸಂಶೋಧನೆ ಕೈಗೊಂಡಿದ್ದು, ಇದು ಭಾರತೀಯ ಪರಂಪರೆಗೆ ಅತ್ಯಂತ ಅಮೂಲ್ಯ ವಸ್ತುಗಳು ಎಂದು ಭಾರತೀಯ ಪುರಾತತ್ವ ಇಲಾಖೆ, ಕೇಂದ್ರ ಸಂಸ್ಕೃತಿ ಸಚಿವಾಲಯ, ದೆಹಲಿಯ ಭಾರತೀಯ ವಸ್ತುಸಂಗ್ರಹಾಲಯ ಮಾನ್ಯತೆ ನೀಡಿದೆ ಎಂದರು.
ಅಪರೂಪದಲ್ಲೇ ಅಪರೂಪದ ಈ ವಸ್ತುಗಳನ್ನು ಫಿಲಿಫೈನ್ಸ್ ನಿಂದ ಜೋಪಾನವಾಗಿ ಭಾರತಕ್ಕೆ ತಂದು ಸಂಬಂಧಪಟ್ಟ ಸಚಿವಾಲಯಗಳ ಅನುಮತಿಯೊಂದಿಗೆ ಸಂರಕ್ಷಿಸಲಾಗಿದೆ. ಇದನ್ನು ದೇಶದ ಜನರಿಗೆ ಇದೇ ಮೊದಲ ಬಾರಿಗೆ ಪ್ರದರ್ಶಿಸಲಾಗುತ್ತಿದೆ. ಪುರಾತತ್ವ ಇಲಾಖೆಯ ಜೊತೆಗೆ ಈಗಾಗಲೇ ಹಲವಾರು ಹಿಂದೂ ಧಾರ್ಮಿಕ ಸಂಸ್ಥೆಗಳು, ಟ್ರಸ್ಟ್ ಗಳ ಮುಖ್ಯಸ್ಥರು ಈ ವಸ್ತುಗಳನ್ನು ಪರಿವೀಕ್ಷಿಸಿ ಇವು ಭಾರತೀಯ ಪರಂಪರೆಗೆ ಅತ್ಯಂತ ಅಗತ್ಯವಾದ ವಸ್ತುಗಳೆಂದು ಋಜುವಾತುಪಡಿಸಿದ್ದಾರೆ. ಹಲವಾರು ರಾಜಕೀಯ ಮುತ್ಸದ್ದಿಗಳು ಸಹ ಈ ವಸ್ತುಗಳು ಮತ್ತು ಇವುಗಳ ಮಹತ್ವದ ಮುಕ್ತ ಕಂಠದಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಇವು ಮೌಲ್ಯ ಕಟ್ಟಲಾಗದ ಸರ್ವಶ್ರೇಷ್ಠ ನಿಧಿಯಾಗಿದ್ದು, ಇಂತಹ ವಸ್ತುಗಳು ಭಾರತವಷ್ಟೇ ಅಲ್ಲದೇ ಇಡೀ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ ಎಂಬುದು ತಾವು ಸತತ 7 ವರ್ಷಗಳ ಕಾಲ ಕೈಗೊಂಡ ಸಂಶೋಧನೆಯಿಂದ ಋಜುವಾತಾಗಿದೆ. ಇವು ಹಿಂದೂ ಪುರಾಣದೊಂದಿಗೆ ಸಂಬಂಧ ಬೆಸೆದುಕೊಂಡ ವಸ್ತುಗಳು ಎಂಬುದನ್ನು ಸಾಕಷ್ಟು ಮಂದಿ ಹಿಂದೂ ಪಂಡಿತರು ಹೇಳಿರುವುದಾಗಿ ಸಯ್ಯದ್ ಸಮೀರ್ ಹುಸೇನ್ ಮಾಹಿತಿ ನೀಡಿದರು.
“ತಾವು 2012 ರಿಂದಲೂ ಫಿಲಿಫೈನ್ಸ್ ನಲ್ಲಿ ಕಬ್ಬಿಣ ಮತ್ತು ಚಿನ್ನದ ಗಣಿಗಾರಿಕೆ ನಡೆಸುತ್ತಿದ್ದು, 2015 ರ ಮೇ 5 ರಂದು ಅಪರೂಪದ ವಸ್ತುಗಳು ಒಟ್ಟಿಗೆ ದೊರೆತಿವೆ. ಇವುಗಳನ್ನು ನೀರಿನಿಂದ ತೊಳೆದು ಪರಿಶೀಲಿಸಿದಾಗ ನಿಜಕ್ಕೂ ಅಚ್ಚರಿಯಾಯಿತು. ನಮ್ಮ ಗಣಿ ಪ್ರದೇಶ ಬೆಟ್ಟಗುಟ್ಟಗಳಿಂದ ಕೂಡಿದ ದುರ್ಗಮ ತಾಣವಾಗಿದ್ದು, ಒಂದು ಕಾಲದಲ್ಲಿ ಇದು ಹಿಮಾಲಯ ಪರ್ವತಶ್ರೇಣಿಗೆ ಸೇರಿತ್ತು ಎಂಬ ಪ್ರತೀತಿ ಇದೆ. ಸುಮಾರು 200 ಅಡಿ ಆಳದಲ್ಲಿ ದೊರೆತ ಈ ನಿಧಿಯನ್ನು ನಂತರ ಭಾರತಕ್ಕೆ ತಂದು ಭಾರತೀಯ ಪುರಾತತ್ವ ಇಲಾಖೆಯ ಉನ್ನತ ಅಧಿಕಾರಿಗಳಿಗೆ ತೋರಿಸಿ ಅಲ್ಲಿ ನೋಂದಣಿ ಮಾಡಿಸಿದ್ದೇನೆ. ಕೇಂದ್ರ ಸಂಸ್ಕೃತಿ ಸಚಿವಾಲಯ, ದೆಹಲಿಯ ಭಾರತೀಯ ವಸ್ತುಸಂಗ್ರಹಾಲಯಗಳು ಮಾನ್ಯತೆ ನೀಡಿವೆ. ನಂತರ ಮುಂಬೈನಲ್ಲಿರುವ ಪ್ರಾಚೀನ ವಸ್ತುಗಳ ವಿಭಾಗದಲ್ಲಿಯೂ ಸಹ ನೋಂದಣಿ ಮಾಡಿಸಲಾಗಿದೆ” ಎಂದರು.
ಭಾರತೀಯ ಪುರಾತತ್ವ ಇಲಾಖೆ ಒಪ್ಪಿಗೆ ಪಡೆದು ಈ ವಸ್ತುಗಳನ್ನು ಇದೀಗ ಜನರ ಬಳಿ ಇವುಗಳನ್ನು ತಂದಿದ್ದು, ದೇಶದ ಜನತೆ, ಧಾರ್ಮಿಕ ಪಂಡಿತರು, ಪ್ರಮುಖ ಮುಖಂಡರ ಸಲಹೆ ಪಡೆದು ಮುಂದೇನು ಮಾಡಬೇಕು ಎಂಬ ಕುರಿತು ನಿರ್ಧರಿಸಲಾಗುವುದು ಎಂದು ಸಯ್ಯದ್ ಸಮೀರ್ ಹುಸೇನ್ ಸ್ಪಷ್ಟಪಡಿಸಿದರು.