ಬೆಂಗಳೂರು | ರಾಜ್ಯ ಸರ್ಕಾರ ಮತ್ತು ಗುತ್ತಿಗೆದಾರರು ಜೊತೆಯಾಗಿ ಲೂಟಿ ಮಾಡುತ್ತಿದ್ದು, ಕಾಂಟ್ರಾಕ್ಟರ್ ಅಸೋಸಿಯೇಷನ್ ಸರ್ಕಾರದ ಕಮಿಷನ್ ಕಲೆಕ್ಷನ್ ಸೆಂಟರ್ ಆಗಿದೆ. ಅಕ್ರಮ ಹಣ ಪತ್ತೆಯಾಗಿರುವ ಕುರಿತು ಇಡಿ ಹಾಗೂ ಸಿಬಿಐ ಎರಡೂ ತನಿಖೆಯಾಗಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಮಾಧ್ಯಮಗಳಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಬಂದಾಗಿನಿಂದ ಟ್ರಾನ್ಸ ಫರ್ ನಿಂದ ಹಿಡಿದು ಎಲ್ಲದರಲ್ಲೂ ಭ್ರಷ್ಟಾಚಾರ ಇದೆ. ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರ್ಕಾರ ಇದು. ಗ್ರಾಮದಿಂದ ಹಿಡಿದು ವಿಧಾನಸೌಧದವರೆಗೂ ಭ್ರಷ್ಟಾಚಾರ ಇದೆ. ಬಹಿರಂಗವಾಗಿಯೇ ಕಮಿಷನ್ ದಂಧೆ ನಡೆಯುತ್ತಿದೆ. ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಯಾದ ತಕ್ಷಣವೇ ಗುತ್ತಿಗೆದಾರನ ಸಂಬಂಧಿಕರ ಮನೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣ ಸಿಕ್ಕಿರುವುದು ಇದೇ ಮೊದಲು. ಸರ್ಕಾರ 10% ಕಮಿಷನ್ ಪಡೆದಿರುವುದು ಸಾಬೀತಾಗಿದೆ. ಇನ್ನಷ್ಟು ಗುತ್ರಿಗೆದಾರರ ಮನೆಮೇಲೆ ದಾಳಿ ಮಾಡಿದರೆ ಇನಷ್ಟು ಕಮಿಷನ್ ಹಣ ಹೊರ ಬರಲಿದೆ ಎಂದು ಹೇಳಿದರು.
ಕಲೆಕ್ಷನ್ ಸೆಂಟರ್
ಗುತ್ತಿಗೆದಾರರ ಸಂಘದವರು ನಮ್ಮ ಮೆಲೆ ಯಾವುದೇ ದಾಖಲೆ ಇಲ್ಲದೇ ಆರೋಪ ಮಾಡಿದ್ದರು. ಈಗ ಕಾಂಟ್ರಾಕ್ಟರ್ ಅಸೋಷಿಯೇಷನ್ ಸರ್ಕಾರದ ಕಮಿಷನ್ ಕಲೆಕ್ಷನ್ ಸೆಂಟರ್ ಆಗಿದೆ. ಈ ಹಿಂದೆ ಇದೇ ವ್ಯಕ್ತಿ ಲಂಚ ಕೊಟ್ಟಿರುವ ಆರೋಪ ಬಂದಾಗ ಆತ ನಾನು ಕಾಂಟ್ರಾಕ್ಟ್ ಮಾಡಿಲ್ಲ ಅಂತ ಹೇಳಿದ್ಸರು. ಕಾಂಟ್ರಾಕ್ಟರ್ ಮತ್ತು ಸರ್ಕಾರ ಒಂದಾಗಿ ರಾಜ್ಯ ಲೂಟಿ ಮಾಡಿದ್ದಾರೆ. ಅಕ್ರಮ ಹಣ ಸಂಗ್ರಹದ ಹಿನ್ನೆಲೆಯಲ್ಲಿ ಮನಿ ಲ್ಯಾಂಡರಿಂಗ್ ಆಕ್ಟನಲ್ಲಿ ಇಡಿ ತನಿಖೆ ಆಗಬೇಕು. ಭ್ರಷ್ಟಾಚಾರ ಕಾಯ್ದೆಯಡಿ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಆಯೋಗಕ್ಕೆ ನೀಡಿ
ಕಮಿಷನ್ ಆರೋಪದ ಕುರಿತು ಮಾಧ್ಯಮಗಳ ಪ್ರಶ್ನೆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾರಾದರೂ ನೋಡಿದ್ದೀರಾ ಅಂತ ಕೇಳಿದ್ದಾರೆ. ನಮ್ಮ ಸರ್ಕಾರದ ವಿರುದ್ದ 40% ಆರೋಪ ಮಾಡಿದಾಗ ನೀವು ನೋಡಿದ್ದೀರಾ..? ಈ ಪ್ರಕರಣದಲ್ಲಿ ಮುಖ್ಯಮಂತ್ರಿಯ ಯಾವುದೇ ಪಾತ್ರ ಇಲ್ಲದಿದ್ದರೆ, ನೀವೇ ನೇಮಿಸಿರುವ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗಕ್ಕೆ ಈ ಪ್ರಕರಣ ನೀಡಬೇಕು. ಇಲ್ಲವೇ ಲೋಕಾಯುಕ್ತಕ್ಕೆ ನೀಡಬೇಕು. ಈ ಪ್ರಕರಣದ ಮೂಲ ಪತ್ತೆ ಆಗಬೇಕಾದರೆ ತನಿಖೆ ಆಗಬೇಕು ಎಂದು ಹೇಳಿದರು.
ಐದು ರಾಜ್ಯದ ಚುನಾವಣೆಗೆ ಎಟಿಎಂ ಥರಾ ಕೆಲಸ ಮಾಡುತ್ತಿರುವ ನೀವು ಭ್ರಷ್ಟಾಚಾರದ ವಿರುದ್ದ ಮತನಾಡುವ ನೈತಿಕತೆ ಇಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೇ 42 ಕೊಟಿ ರೂಮಸಿಕ್ಕಿರುವುದಕ್ಕೂ ಸಿಎಂ ಭೇಟಿ ಮಾಡಿದ್ದಾರೆ. ಸೆಲೆಕ್ಟಿವ್ ಆಗಿ ಪೇಮೆಂಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದೇ ಭ್ರಷ್ಟಾಚಾರದ ಪುರಾವೆಯಾಗಿದೆ. ಲಂಚ ಕೊಟ್ಟವರಿಗೆ ಬಿಲ್ ಬಿಡುಗಡೆ ಮಾಡುತ್ತಿದ್ದಾರೆ. ಇದನ್ನು ಮುಖ್ಯಮಂತ್ರಿಗಳು ಸರಿ ಪಡಿಸುವುದಾಗಿ ಹೇಳಿದ್ದಾರೆ. ಅಂದರೆ ಭ್ರಷ್ಟಾಚಾರ ನಡೆದಿದೆ ಎನ್ನುವುದು ಅವರು ಒಪ್ಪಿಕೊಂಡಂತಾಗಿದೆ ಎಂದು ಹೇಳಿದರು.
ಪ್ರೊ. ಭಗವಾನ ಹೀನ ಮನಸ್ಥಿತಿ
ಪ್ರೊ. ಭಗವಾನ್ ಒಕ್ಕಲಿಗ ಸಮುದಾಯದ ಬಗ್ಗೆ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಸಮುದಾಯದ ವಿರುದ್ದ ಮಾತನಾಡುವ ವ್ಯಕ್ತಿಗಳು ಹೀನ ಮನಸ್ಥಿತಿಯವರು, ಅವರು ತಮಗೆ ಬೇಕಾದವರನ್ನು ಹೊಗಳಿಕೊಳ್ಳಲಿ. ಆದರೆ, ಬುದಿಜೀವಿಗಳು ಅಂತ ಬಿಂಬಿಸಿಕೊಂಡು ಒಂದು ಸಮುದಾಯದ ವಿರುದ್ದ ತುಚ್ಯವಾಗಿ ಮಾತನಾಡುವುದು ಸರಿಯಲ್ಲ. ಇಂತವರಿಗೆ ಸರ್ಕಾರ ಬೆಂಬಲ ಕೊಡುತ್ತಿರುವುದರಿಂದ ಅವರು ಈ ರೀತಿಯ ಮಾತುಗಳನ್ನಾಡುತ್ತಿದ್ದಾರೆ ಎಂದು ಹೇಳಿದರು.